ಡೆಂಗ್ಯೂ ನಿಯಂತ್ರಣದ ಜಿಲ್ಲಾ ಟಾಸ್ಕ್ ಪೊರ್ಸ ಸಮಿತಿ ಸಭೆ
ಧಾರವಾಡ,ಜು.17:ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡೆಂಗ್ಯೂ ಪರಿಸ್ಥಿತಿಯ ದೈನಂದಿನ ನಿಗಾವಣೆಗಾಗಿ ರಚಿಸಿರುವ ಜಿಲ್ಲಾ ಮಟ್ಟದ ಟಾಸ್ಕ್ ಪೊರ್ಸ ಸಮಿತಿ ಸಭೆ ಜರುಗಿತು.
ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಡೆಂಗ್ಯೂ ಹಾಟಸ್ಪಾಟಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ಲಾರ್ವಾನಾಶ, ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ನೀರು ಸಂಗ್ರಹ ಆಗದಂತೆ ಮುನ್ನೆಚ್ಚರಿಕೆವಹಿಸಿ, ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು
ಶನಿವಾರ ಸ್ವಚ್ಚತಾ ಅಭಿಯಾನ: ಜಿಲ್ಲೆಯ ಎಲ್ಲ ಪ್ರಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರತಿ ಶನಿವಾರ ಸ್ವಚ್ಚತಾ ಅಭಿಯಾನ ಕೈಗೊಳ್ಳಬೇಕು. ಮಕ್ಕಳಲ್ಲಿ ಡೆಂಗ್ಯೂ ಜಾಗೃತಿಮೂಡಿಸಬೇಕು ಮತ್ತು ಈ ಕಾರ್ಯಕ್ರಮ ಶಾಲೆಯ ಎಸ್‍ಡಿಎಂಸಿ ಸದಸ್ಯರನ್ನು ಆಹ್ವಾನಿಸಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಿರಂತರ ಜ್ವರವಿದ್ದರೆ ಆಸ್ಪತ್ರೆಗೆ ಬನ್ನಿ: ಜ್ವರ ಬಂದಾಗ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆ ಮೇರೆಗೆ ಅಗತ್ಯವಿದ್ದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೋಂದಾಯಿತ ಖಾಸಗಿ ಆಸ್ಪತ್ರೆಗಳು ಪರೀಕ್ಷೆಗೆ ಒಳಪಡುವ ರೋಗಿಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಕಲಿ ವೈದ್ಯರ ಪತ್ತೆಗೆ ಕ್ರಮವಹಿಸಿ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಕಲಿ ವೈದ್ಯರು ಪ್ರ್ಯಾಕ್ಟಿಸ್ ಮಾಡುತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಕೆಲವು ಹೊಮಿಯೊಪತಿ ವೈದ್ಯರು ಅಲೋಪತಿ ಔಷಧಿ ನೀಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ತುರ್ತುಕ್ರಮ ವಹಿಸದಿದ್ದರೆ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಡೆಂಗ್ಯೂ ಪರೀಕ್ಷೆ ದರದ ಬಗ್ಗೆ ಆಸ್ಪತ್ರೆಯಲ್ಲಿ ಪ್ರಕಟಿಸಿ: ಪ್ರತಿ ಆಸ್ಪತ್ರೆ ಆವರಣದಲ್ಲಿ ಆಸ್ಪತ್ರೆಗೆ ಬರುವವರಿಗೆ ಎದ್ದು ಕಾಣುವಂತೆ ಸರಕಾರದಿಂದ ಡೆಂಗ್ಯೂ ಪರೀಕ್ಷೆಗೆ ಮಾಡಿರುವ ದರದ ಪಟ್ಟಿಯನ್ನು ಪ್ರಕಟಿಸಬೇಕು. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಖಚಿತಪಡಿಸಿಕೊಳ್ಳಬೇಕು. ಹೆಚ್ಚುದರ ವಸೂಲಿ ಕಂಡು ಬಂದರೆ ಅಂತಹ ಆಸ್ಪತ್ರೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಕಿಮ್ಸ ಆಸ್ಪತ್ರೆಯ ಡಾ.ಲಕ್ಷ್ಮಿಕಾಂತ ಲೊಕರೆ ಸೇರಿದಂತೆ ಐ.ಎಂ.ಎ., ಐ.ಎ.ಪಿ ಜಿಲ್ಲಾಧ್ಯಕ್ಷರು, ಸಮಿತಿಯ ಇತರ ಸದಸ್ಯರು ಭಾಗವಹಿಸಿದ್ದರು.