ಆರಂಭವಾಗದ ಇಲಾಖಾ ಕಚೇರಿಗಳು
ಲಕ್ಷ್ಮೇಶ್ವರ,ಜು17: ಅಖಂಡ ಶಿರಟ್ಟಿಯನ್ನು ವಿಭಜಿಸಿ, ಲಕ್ಷ್ಮೇಶ್ವರ ತಾಲೂಕನ್ನಾಗಿ ಘೋಷಿಸಿ ಏಳು ವರ್ಷಗಳು ಸಮೀಪಿಸುತ್ತಿದ್ದರು ಏಳು ಕಚೇರಿಗಳು ಕೂಡ ಆರಂಭವಾಗಿಲ್ಲ.
ಲಕ್ಷ್ಮೇಶ್ವರ ತಾಲೂಕಿನ 43 ಗ್ರಾಮಗಳ ಜನಸಾಮಾನ್ಯರು ರೈತರು ಕೆಲವು ಕೆಲಸಗಳಿಗೆ ಮತ್ತೆ ಶಿರಹಟ್ಟಿ ಗೆ ಮುಖ ಮಾಡುವುದು ಅನಿವಾರ್ಯವಾಗಿದೆ. ಹೊಸ ತಾಲೂಕಿಗೆ ಅನೇಕ ಸರ್ಕಾರಿ ಕಚೇರಿಗಳು ಆರಂಭವಾಗಬೇಕಾಗಿದ್ದು ಕೇವಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಾಲೂಕ ಪಂಚಾಯಿತಿ ಕಚೇರಿಯಿಂದ ಹೊರತುಪಡಿಸಿ ಯಾವ ಇಲಾಖೆಗಳ ಕಚೇರಿಗಳು ಆರಂಭವಾಗಿಲ್ಲ.
ಪ್ರಮುಖವಾಗಿ ಕಂದಾಯ ಇಲಾಖೆಯ ತಹಶೀಲ್ದಾರ್ ಕಚೇರಿ ಬಹುತೇಕ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದರು ಭೂ ದಾಖಲೆಗಳು ಸರ್ವೆ ಇಲಾಖೆ ಇದುವರೆಗೂ ಕಾರ್ಯನಿರ್ವಹಿಸದಿರುವುದರಿಂದ ಅನಿವಾರ್ಯವಾಗಿ ಶಿರಹಟ್ಟಿಯ ತಹಶೀಲ್ದಾರ್ ಕಚೇರಿಗೆ ರೈತರು ಜನಸಾಮಾನ್ಯರು ಎಡತಾಕುವುದು ಅನಿವಾರ್ಯವಾಗಿದೆ.
ಹೊಸ ತಾಲೂಕಿಗೆ ಪ್ರಮುಖವಾಗಿ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಉಪವಿಭಾಗ ಲೋಕೋಪಯೋಗಿ ಇಲಾಖೆಯ ಉಪ ವಿಭಾಗ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕೃಷಿ ಇಲಾಖೆ ತೋಟಗಾರಿಕಾ ಇಲಾಖೆ ರೇಷ್ಮೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸರ್ವೇ ಇಲಾಖೆ ಅಂಕಿ ಸಂಖ್ಯೆ ಇಲಾಖೆ ಸಹಕಾರ ಇಲಾಖೆ ಕಾರ್ಮಿಕ ಇಲಾಖೆ ಅಬಕಾರಿ ಇಲಾಖೆ ಪ್ರಮುಖವಾಗಿವೆ.
ಆದರೆ ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದ ಅಬಕಾರಿ ಇಲಾಖೆಯನ್ನು ಸಹ ರಾತ್ರೋರಾತ್ರಿ ಕಚೇರಿ ಸ್ಥಳಾಂತರ ಮಾಡಿ ಇದ್ದ ತಾಲೂಕ ಮಟ್ಟದ ಕಚೇರಿಯನ್ನು ಎತ್ತಂಗಡಿ ಮಾಡಲಾಯಿತು.
ಈಗ ತಹಶೀಲ್ದಾರ್ ಕಚೇರಿ ಆಗಲಿ ತಾಲೂಕಾ ಪಂಚಾಯತಿ ಕಚೇರಿ ಆಗಲಿ ಕಿರಿದಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮೀಣ ಪ್ರದೇಶದಿಂದ ಬರುವ ಜನಸಾಮಾನ್ಯರು ಕಚೇರಿಯ ಮುಂದೆ ಒಂಟಿಗಾಲಿನಲ್ಲಿ ನಿಲ್ಲುವ ಸ್ಥಿತಿಯಿದೆ . ತಾಲೂಕು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದು ಹೊಸ ತಾಲೂಕುಗಳಿಗೆ ಮುಕ್ತಿ ನೀಡುವವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಕುರಿತು ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತ ಶೆಟ್ಟರ್ ಅವರು ಪ್ರತಿಕ್ರಿಯೆ ನೀಡಿ ತಾಲೂಕು ಹೊಸದಾಗಿ ಏಳು ವರ್ಷಗಳಾದರು ಪೂರ್ಣ ಪ್ರಮಾಣದ ತಾಲೂಕ ಮಟ್ಟದ ಕಚೇರಿಗಳು ಆರಂಭವಾಗಿಲ್ಲ ಆದ್ದರಿಂದ ಸರ್ಕಾರ ಅವಶ್ಯವಿರುವ ಲೋಕೋಪಯೋಗಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪ ವಿಭಾಗ ಕೃಷಿ ಇಲಾಖೆ ತೋಟಗಾರಿಕಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವನ್ನಾದರೂ ಆರಂಭಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.