ಕೆರೆಯಂತಾದ ಮ.ಮ ಬೆಟ್ಟದ ರಂಗಸ್ವಾಮಿ ಒಡ್ಡು ರಸ್ತೆ
ಸಂಜೆವಾಣಿ ವಾರ್ತೆ
ಹನೂರು ಜು 17 :- ತಾಲೂಕಿನ ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದ ಬಸವನ ಹಾದಿಯ ಮಧ್ಯೆ ಬರುವ ರಂಗಸ್ವಾಮಿ ಒಡ್ಡುವಿನ ಮುಂದೆ ಮುಖ್ಯ ರಸ್ತೆ ಸಂಪೂರ್ಣ ಗುಂಡಿಯಾಗಿ ಕೆರೆಯಂತಾಗಿರುವುದು ವಾಹನ ಸವಾರರ ಸಂಚಾರಕ್ಕೆ ಸಂಚಕಾರವಾಗಿ ಅಪಘಾತಕ್ಕೆ ಎಡೆಮಾಡಿಕೊಟ್ಟಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ರಂಗಸ್ವಾಮಿ ಒಡ್ಡು ಮುಂದೆ ರಸ್ತೆ ಸಂಪೂರ್ಣ ಹೊಂಡ ನಿರ್ಮಾಣವಾಗಿದೆ ಮಳೆಗಾಲದಲ್ಲಿ ಕೆರೆಯಾಗಿದೆ. ವಾಹನ ಸವಾರರು ಆಯಾತಪ್ಪಿ ಬಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ. ದಿನ ನಿತ್ಯ ಇದೆ ರಸ್ತೆ ಮಾರ್ಗವಾಗಿ ಪಿಡಬ್ಲ್ಯೂಡಿ ಇಂಜಿನಿಯರ್ ಅಧಿಕಾರಿಗಳು ತೆರಳುತ್ತಿದ್ದರಾದರು ಕಂಡರು ಕಾಣದಂತೆ ಇರುವುದು ಇವರ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಕೋಟಿ ಕೋಟಿ ಆದಾಯ ಹೆಚ್ಚಾದಂತೆ ಯಾತ್ರಾರ್ಥಿಗಳಿಗೆ ಮುಖ್ಯವಾಗಿ ಬೇಕಾದಂತಹ ಉತ್ತಮ ರಸ್ತೆ ಸುರಕ್ಷತಾ ಕ್ರಮಗಳು ಇಲ್ಲದಿರುವುದು ವಿಪರ್ಯಾಸವೇ ಸರಿ. ಮಳೆಗಾಲದಲಂತೂ ವಾಹನ ಸವಾರರು ಜಾಗರೂಕರಾಗಿ ವಾಹನಗಳನ್ನು ಸಂಚರಿಸುವ ಮೂಲಕ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕಾಗಿದೆ.
ತಡೆಗೋಡೆ ಇಲ್ಲದೆ ಸವಾರರು ಮೈಮರೆತರೆ ಅಫಘಾತ ತಪ್ಪಿದ್ದಲ್ಲ
ಶ್ರೀ ಮಲೆ ಮಹದೇಶ್ವರ ಬೆಟ್ಟದ ಆನೆತಲೆ ದಿಂಬದಿಂದ ಆಸು-ಪಾಸು ಹಲವು ಕಡೆ ರಸ್ತೆಯ ತಡೆಗೋಡೆಗಳು ಕಿತ್ತು ಹೋಗಿದ್ದು ವಾಹನ ಸವಾರರು ಮೈಮರೆತರೆ ಅಫಘಾತ ತಪ್ಪಿದ್ದಲ್ಲ. ಆನೆತಲೆ ದಿಂಬು ಬೆಟ್ಟದಿಂದ ತೀವ್ರ ಇಳಿಜಾರು ತಿರುವುಗಳ ಮಾರ್ಗವಾಗಿ ರಸ್ತೆಯಲ್ಲಿ ವಾಹನಗಳನ್ನು ಸಂಚರಿಸುವಾಗ ತಡೆಗೋಡೆಗಳು ಇಲ್ಲದಂತಾಗಿದೆ.
ತೀವ್ರ ತಿರುವುಗಳಲ್ಲಿ ರಸ್ತೆಯ ಬದಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗಿದ್ದು ಅಲ್ಲಲ್ಲಿ ತಡೆಗೋಡೆಗಳು ಕುಸಿದು ಬಿದ್ದಿರುವುದು ಕೆಲವು ಕಡೆ ತಡೆಗೋಡೆಗಳ ಇಲ್ಲದಂತಾಗಿರುವುದು ಕಂಡು ಬರುತ್ತದೆ. ಮಾದೇಶ್ವರ ಬೆಟ್ಟಕ್ಕೆ ದಿನೇದಿನೇ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ದಿನ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
ಆನೆತಲೆ ದಿಂಬು ಆಸು ಪಾಸಿನಲ್ಲಿ ತಡೆಗೋಡೆಗಳಿಲ್ಲದೆ ಇರುವುದರಿಂದ ಅನಾಹುತಕ್ಕೆ ಆಹ್ವಾನ ನೀಡುವಂತಿದೆ ಆದಕಾರಣ ಶೀಘ್ರವಾಗಿ ತಡೆಗೋಡೆ ನಿರ್ಮಿಸಬೇಕಾಗಿದೆ. ಹಾಗೂ ರಂಗಸ್ವಾಮಿ ಒಡ್ಡಿನ ಬಳಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ತಡೆಗೋಡೆ ನಿರ್ಮಾಣ ಮತ್ತು ರಸ್ತೆಯನ್ನು ದುರಸ್ತಿ ಪಡಿಸಿ ಮುಂದಾಗುವ ಅಪಘಾತಗಳನ್ನು ತಪ್ಪಿಸಬೇಕಾಗಿದೆ.