ಖಾಸಗಿ ಸಂಸ್ಥೆಗೆ ಜಾಗ ನೀಡಿರುವುದಕ್ಕೆ ಖಂಡನೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.17:-ಶ್ರೀ ಮಹರ್ಷಿ ವಾಲ್ಮೀಕಿ ಭವನಕ್ಕೆ ಮೀಸಲಿಟ್ಟ ಭೂಮಿಯನ್ನು ಖಾಸಗಿ ಸಂಸ್ಥೆಯವರಿಗೆ ಮಂಜೂರು ಮಾಡಿರುವ ಶಿಫಾರಸ್ಸನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿ ಕರ್ನಾಟಕ ವೀರ ಕೇಸರಿ ಪಡೆ ವತಿಯಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ತಾಲೂಕಿನ ಕಸಬಾ ಹೋಬಳಿಯ ಸರ್ವೇ ನಂ.92ರಲ್ಲಿ ಖಾಲಿ ಇದ್ದ ಸರ್ಕಾರಿ ಜಾಗವನ್ನು ವಾಲ್ಮೀಕಿ ಭವನಕ್ಕೆ ಕಾಯ್ದಿರಿಸಲು ತಹಸೀಲ್ದಾರ್ ಪತ್ರ ಬರೆದಿದ್ದರು. ಜೆಎಸ್‍ಎಸ್ ಸಂಸ್ಥೆ ಇದೇ ಜಾಗವನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ತಹಸೀಲ್ದಾರ್ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಜೆಎಸ್‍ಎಸ್ ಸಂಸ್ಥೆಯವರಿಗೆ ವಾಲ್ಮೀಕಿ ಭವನಕ್ಕೆ ಮೀಸಲಿಟ್ಟ ಜಾಗವನ್ನು ಮಂಜೂರು ಮಾಡಲು ಉಪವಿಭಾಗಾಧಿಕಾರಿಗೆ ಶಿಫಾರಸು ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಜಿಲ್ಲಾಧಿಕಾರಿ ನ್ಯಾಯ, ನೀತಿ, ಧರ್ಮ ಮನಗಾಣದೆ ಬಲಾಢ್ಯರ ಒತ್ತಡಕ್ಕೆ ಮಣಿದು ಶೋಷಿತ, ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ಹಗರಣ ಮತ್ತು ಇಂತಹ ಭ್ರಷ್ಟ ಅಧಿಕಾರಿಗಳ ಮೂಲಕ ಪರಿಶಿಷ್ಟರನ್ನು ದಮನ ಮಾಡುತ್ತಿದೆ. ಕೂಡಲೇ ಖಾಸಗಿ ಸಂಸ್ಥೆಗೆ ಸರ್ಕಾರ ಜಾಗ ನೀಡಲು ಮಾಡಿರುವ ಶಿಫಾರಸು ವಾಪಸ್ ಪಡೆಯಬೇಕು. ವಾಕ್ಮೀಕಿ ನಿಗಮದ ಭ್ರಷ್ಟಾಚಾರ ತಡೆದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದ್ಯಾವಪ್ಪ ನಾಯಕ, ಹುಣಸೂರು ಪ್ರಭಾಕರ್, ಕಡಕೊಳ ಕುಮಾರಸ್ವಾಮಿ, ಬದನಗುಪ್ಪೆ ನಾರಾಯಣ್, ವಿನೋದ್ ನಾಗವಾಲ, ನಾಗವಾಲ ತಿಮ್ಮನಾಯಕ, ಸತೀಶ್‍ಬಾಬು, ರಂಗಸ್ವಾಮಿ, ಸಂತೋಷ್, ದುಂಡಯ್ಯ ಗುಂಡ್ಲುಪೇಟೆ, ಮದುಚನ ಚಂದ್ರು, ಸುರೇಶ್, ರಂಗಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.