ವಿದ್ವಾಂಸರ ವಿದ್ವತ್ತು ಸಮಾಜಕ್ಕೆ ಬೆಳಕಾಗಬೇಕು: ವಿದ್ಯೇಶ ತೀರ್ಥ ಸ್ವಾಮೀಜಿ ಆಶಯ
ಸಂಜೆವಾಣಿ ನ್ಯೂಸ್
ಮೈಸೂರು: ಜು.17:- ವಿದ್ವಾಂಸರ ವಿದ್ವತ್ತು, ಪಂಡಿತರ ಶಾಸ್ತ್ರಜ್ಞಾನವೆಲ್ಲವೂ ಸಮಾಜಕ್ಕೆ, ದೇಶಕ್ಕೆ ಬೆಳಕಾಗಬೇಕು ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಭಂಡಾರಕೇರಿ ಮಠದಲ್ಲಿ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾ ವಿಕಾಸ ಪ್ರತಿಷ್ಠಾನಗಳ ಸಂಯುಕ್ತ ಆಶಯದಲ್ಲಿ ಹಮ್ಮಿಕೊಂಡಿದ್ದ ಶ್ರೀಗಳ 70ನೇ ವರ್ಧಂತಿ ಮಹೋತ್ಸವದ ಅಂಗವಾಗಿ 70 ವಿದ್ವಾಂಸರ ಉಪನ್ಯಾಸ ಸಮಾರೋಪದಲ್ಲಿ 70 ಜನ ವಿದ್ವಾಂಸರಿಗೆ ಬಂಗಾರದ ಉಂಗುರ ಸಹಿತ ಸನ್ಮಾನ ಪ್ರದಾನ ಮಾಡಿ ಮಾತನಾಡಿದ ಅವರು, ವೇದ ಪಂಡಿತರು, ವಿದ್ವಾಂಸರು ಮಾಡುವ ಸೇವೆ ರಾಷ್ಟ್ರಗುರು ಭಗವಾನ್ ಶ್ರೀ ವೇದವ್ಯಾಸರಿಗೆ ಪ್ರಾಮಾಣಿಕವಾಗಿ ಸಮರ್ಪಣೆ ಆದಾಗ ಮಾತ್ರ ಅದು ಮಾನ್ಯವೆನಿಸುತ್ತದೆ. ಆ ಮೂಲಕ ಜ್ಞಾನಕಾರ್ಯಗಳಿಗೆ ಪೆÇ್ರೀತ್ಸಾಹಿಸುವುದು ಮತ್ತು ವಿದ್ವಾಂಸರಿಗೆ ಗೌರವಿಸುವುದು ನಮ್ಮ ಮಠದ ಆದ್ಯ ಕರ್ತವ್ಯವಾಗಿದೆ ಎಂದರು.
ಮುಳಬಾಗಿಲು ಶ್ರೀಪಾದರಾಜರ ಮಹಾಸಂಸ್ಥಾನದ ಪೀಠಾಧಿಪತಿ ಸುಜಯನಿಧಿ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ವಿದ್ಯೇಶ ತೀರ್ಥರು ಜ್ಞಾನಕಾರಕ ಚಟುವಟಿಕೆಗಳಿಗೆ ಬಹು ದೊಡ್ಡ ಆಶ್ರಯವಾಗಿದ್ದಾರೆ. ಅವರು ನಡೆಸುವ ಪ್ರತಿ ಚಟುವಟಿಕೆಗಳೂ ವಿಭಿನ್ನ ಮತ್ತು ವಿಶೇಷವಾಗಿರುತ್ತವೆ. ಸಮುದಾಯದ ಪಂಡಿತರನ್ನು ಪೆÇ್ರೀತ್ಸಾಹಿಸಿ, ಸಂಸ್ಕೃತಿ ಪಾಲನೆಗೂ ಮಹತ್ವದ ಕೊಡುಗೆ ಕೊಡುವ ಶ್ರೇಷ್ಠ ಮಟ್ಟದಲ್ಲಿರುತ್ತದೆ. ಇಂಥ ಕಾರ್ಯಗಳನ್ನು ಅವರ ಸಂಸ್ಥಾನ ಸಮರ್ಥವಾಗಿ ನಿಭಾಯಿಸುತ್ತಿರುವುದು ಶ್ಲಾಘನೀಯ ಎಂದರು.
ವಿಷಯ ತಜ್ಞರಾದ ಸಮೀರ ಕಾಗಲ್ಕರ್, ಲೇಖಕ ರಘುರಾಮ, ಡಾ. ಶ್ರೀನಿಧಿ ವಾಸಿಷ್ಠ, ಪಂಡಿತ ಬದರಿ ಆಚಾರ್ಯ ಇತರರು ಇದ್ದರು. ಭಕ್ತರು ವಿವಿಧ ಪರಿಮಳ ಪುಷ್ಪ ವೃಷ್ಟಿ ಮಾಡಿ 71ನೇ ವಸಂತಕ್ಕೆ ಪದಾರ್ಪಣೆ ಮಾಡಿದ ಶ್ರೀ ವಿದ್ಯೇಶ ತೀರ್ಥರಿಗೆ ಗುರುಭಕ್ತಿ ಸಮರ್ಪಿಸಿದರು. ವಿವಿಧ ಮಠ, ಪೀಠ ಮತ್ತು ವೇದ ಶಾಸ್ತ್ರ ಅಧ್ಯಯನ ಸಂಸ್ಥೆಗಳ ವಿದ್ವಾಂಸರು, ಪ್ರವಚನಕಾರರು, ಧರ್ಮ ಕ್ಷೇತ್ರಗಳ ಪ್ರಮುಖರು ಇದ್ದರು.
ತ.ನಾಡಿನ ಶ್ರೀರಂಗಂ ಕ್ಷೇತ್ರದಿಂದ ತಂದಿದ್ದ ಶ್ರೀ ರಂಗನಾಥ ಸ್ವಾಮಿಯ ಪ್ರಸಾದ, ಪುಷ್ಪಮಾಲಿಕೆ ಮತ್ತು ಶ್ರೀಗಂಧ ಇತ್ಯಾದಿಗಳನ್ನು ಶ್ರೀ ವಿದ್ಯೇಶತೀರ್ಥರಿಗೆ ಸಮರ್ಪಿಸಲಾಯಿತು.