ಮುಖ್ಯ ರಸ್ತೆಯಲ್ಲೇ ಬಲಿಗಾಗಿ ಬಾಯ್ತೆರೆದು ಕುಳಿತಿರುವ ಪಾಳು ಬಾವಿ
ಸಂಜೆವಾಣಿ ವಾರ್ತೆ
ಹನೂರು ಜು 17 :- ಹನೂರಿನಿಂದ ಮ.ಬೆಟ್ಟಕ್ಕೆ ತೆರಳುವ ಕೆ-ಶಿಪ್ ಮುಖ್ಯ ರಸ್ತೆಯ ಅಂಚಿನಲ್ಲಿಯೇ ಇರುವ ತೆರೆದ ಪಾಳು ಬಾವಿಯೊಂದು ಬಲಿಗಾಗಿ ಬಾಯ್ತೆರೆದು ಮಲ ಮಿಶ್ರಿತ ಕೊಳಚೆ ನೀರು ಹಾಗೂ ಕಸದ ರಾಶಿಯೊಂದಿಗೆ ತುಂಬಿ ತುಳುಕಿ ಉಚಿತ ಭೀಕರ ಸಾಂಕ್ರಾಮಿಕ ರೋಗವನ್ನು ಹರಡಲು ಸನ್ನದ್ಧವಾಗಿ ನಿಂತಿದ್ದರೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ನಾಗರೀಕರ ಆತಂಕಕ್ಕೆ ಕಾರಣವಾಗಿದೆ.
ಕೆಶಿಫ್ ಮುಖ್ಯ ರಸ್ತೆ ಬದಿಯಲ್ಲಿ ನೂರಾರು ವರ್ಷಗಳಿಂದ ಇರುವ ಈ ಪಾಳು ಬಾವಿಯ ಸುತ್ತಮುತ್ತ ಇರುವ ಹತ್ತಾರು ಹೋಟೆಲ್ ಗಳವರು ಲಾಡ್ಜ್ ನವರು ಸಾಮೂಹಿಕವಾಗಿ ಶೌಚದ ಮಲಿನ ಹಾಗೂ ಕೊಳಕು ನೀರನ್ನು ಪೈಪ್ ಗಳ ಮೂಲಕ ಈ ಪಾಳು ಬಾವಿಗೆ ಬಿಡುತ್ತಿರುವುದಲ್ಲದೆ ಎಲ್ಲಾ ತರಆದಾ ತ್ಯಾಜ್ಯವನ್ನು ಇಲ್ಲಿಗೆ ತಂದು ಸುರಿಯುತ್ತಿರುವುದರಿಂದ ಅಲ್ಲಿ ಶೇಖರಣೆಯಾದ ಕಸದ ರಾಶಿ ಹಾಗೂ ಕೊಳಚೆ ನೀರೆಲ್ಲಾ ಬೆರೆತು ನಿಂತಲ್ಲೇ ನಿಂತು ಮತ್ತಷ್ಟು ಕೊಳೆತು ಗಬ್ಬೆದ್ದು ನಾರುತ್ತಿರುವುದರ ಜತೆಗೆ ಆ ಭಾಗದ ನೂರಾರು ಅಂಗಡಿ ಮುಂಗಟ್ಟುಗಳವರು ಕೂಡಾ ಎಲ್ಲಾ ತರಆದಾ ಕಸದ ರಾಶಿಯನ್ನು ಇಲ್ಲಿಯೇ ಸುರಿಯುತ್ತಿರುವುದರಿಂದ ಕೊಳಚೆ ಮತ್ತಷ್ಟು ತುಂಬಿ ತುಳುಕುತ್ತಿದ್ದು ಗಬ್ಬೆದ್ದು ನಾರುತ್ತಾ ಮುಖ್ಯ ರಸ್ತೆಗೆ ಕಳಂಕ ಪ್ರಾಯವಾಗಿದೆ.
ಸದಾ ಜನಜಂಗುಳಿಯಿಂದ ಕೂಡಿರುವ ಈ ಪ್ರದೇಶದಲ್ಲಿ ಮ.ಬೆಟ್ಟಕ್ಕೆ ತೆರಳುವ ನೂರಾರು ಭಕ್ತರು ಇಳಿದು ಕಾಫಿ-ತಿಂಡಿ ಸೇವಿಸಿ ತೆರಳುತ್ತಿರುವುದರಿಂದ ಹೋಟೆಲ್ ಗಳಲ್ಲಿನ ಅಶುಚಿತ್ವ ಹಾಗೂ ಇಲ್ಲಿನ ವಿಷಮ ಸ್ಥಿತಿಯಿಂದಾಗಿ ಅವರಿಗೂ ಉಚಿತವಾಗಿ ಸಾಂಕ್ರಾಮಿಕ ರೋಗ ಹರಡುವುದು ಖಚಿತವಾಗಿದೆ.
ಇದಲ್ಲದೆ ಇದು ಮುಖ್ಯ ರಸ್ತೆಯ ಅಂಚಿಗೆ ಹೊಂದಿಕೊಂಡಂತೆಯೇ ಇರುವ ತೆರೆದ ಪಾಳು ಬಾವಿಯಾದ್ದರಿಂದ ಕಸವನ್ನು ಮೇಯಲು ಬರುವ ದನಕರು ಜಾನುವಾರುಗಳು ಬಿದ್ದು ಅವಘಡ ಸಂಭವಿಸುವ ಹಾಗೂ ವಾಹನಗಳು ಆಯತಪ್ಪಿ ಬಿದ್ದು ಅಪಾಯಕ್ಕೀಡಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
ಇಷ್ಟೂ ಸಾಲದೆಂಬಂತೆ ಕೆ-ಶಿಪ್ ನವರು ರಸ್ತೆಯ ಬದಿ ಬಾಕ್ಸ್ ಚರಂಡಿ ನಿರ್ಮಿಸಿರುವರಾದರೂ ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಪಾಳು ಬಾವಿಯ ಆಧಿಕೃತ ಜಾಗದ ಮಾಲೀಕರು ಚರಂಡಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದರೂ ನಿಖರ ಕಾರಣವಿಲ್ಲದಿದ್ದರೂ ಕೆ-ಶಿಪ್ ನವರೇ ಅನಗತ್ಯ ವಿವಾಧ ಸೃಷ್ಟಿಸಿ ಈ ಬಾವಿಯ ಅಳತೆಗೆ ಮಾತ್ರ ಚರಂಡಿ ನಿರ್ಮಾಣವನ್ನು ಅರ್ಧಕ್ಕೆ ಕೈಬಿಟ್ಟು ಅವೈಜ್ಞಾನಿಕವಾಗಿ ಮುಂದಕ್ಕೆ ಚರಂಡಿ ನಿರ್ಮಿಸಿರುವುದು ಸಹ ಅಪಾಯಕ್ಕೆ ಮತ್ತಷ್ಟು ಆಹ್ವಾನ ನೀಡುತ್ತಿದೆ.
ಇದರಿಂದಾಗಿ ಎಲ್ಲಾ ಕಡೆಯಿಂದ ಈ ಚರಂಡಿ ಮೂಲಕ ಬರುವ ಕೊಳಚೆ ನೀರು ಈ ಪಾಳು ಬಾವಿಗೆ ನುಗ್ಗಿ ಮತ್ತಷ್ಟು ಅವಾಂತರ ಸೃಷ್ಟಿಸುವುದರ ಜತೆಗೆ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ತರಆದಾ ವಾಹನಗಳು ಆಯ ತಪ್ಪಿ ನುಗ್ಗಿದಲ್ಲಿ ಈ ಚರಂಡಿಯ ಗ್ಯಾಪ್ ನಲ್ಲಿ ಪಾಳು ಬಾವಿಗೆ ಬಿದ್ದು ಗಂಭೀರ ಅವಘಡ ಸಂಭವಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಮೊದಲೇ ರಾಜ್ಯಾದ್ಯಂತ ಎಲ್ಲೆಂದರಲ್ಲಿ ಡೆಂಗ್ಯೂ ಜ್ವರದಂತಹ ಹಲವಾರು ಸಾಂಕ್ರಾಮಿಕ ರೋಗಗಳು ಶರವೇಗದಲ್ಲಿ ಉಲ್ಬಣಿಸುತ್ತಿದ್ದು ಈ ರಣ ಕೊಳಕಿನಿಂದ ಇಲ್ಲಿಗೂ ವ್ಯಾಪಿಸುವ ಮುನ್ನ ಎಚ್ಚೆತ್ತು ಕೂಡಲೇ ಪಟ್ಟಣ ಪಂಚಾಯ್ತಿಯವರು ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿರುವ ಈ ಪಾಳು ಬಾವಿಯ ಕೊಳಚೆಯನ್ನು ತೆರವುಗೊಳಿಸಿ ಬಾವಿಯನ್ನು ಮುಚ್ಚಿ ರೋಗ ಹರಡುವಿಕೆಗೆ ತಡೆಯೊಡ್ಡದಿದ್ದಲ್ಲಿ ಜತೆಗೆ ಕೆ-ಶಿಪ್ ನವರು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಅಪೂರ್ಣ ಚರಂಡಿ ಕಾಮಗಾರಿಯನ್ನು ಪೂರ್ಣಿಗೊಳಿಸಿ ಸುರಕ್ಷತೆಗೆ ಅಧ್ಯತೆ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ಇದರಿಂದುಂಟಾಗುವ ಅವಘಡಗಳಿಗೆ ಪ.ಪಂಚಾಯ್ತಿ ಹಾಗೂ ಕೆ-ಶಿಪ್ ನವರೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಪ್ರಬುದ್ಧ ನಾಗರೀಕರು ಎಚ್ಚರಿಸಿದ್ದಾರೆ.