ಚಾ.ನಗರ ನಗರಸಭೆ ವಿಶೇಷ ಸಭೆಯಲ್ಲಿ 5.66 ಕೋಟಿ ರೂ.ಗಳ ಯೋಜನೆಗಳಿಗೆ ಅನುಮೋದನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 17- ನಗರಸಭೆ ವಿವಿಧ ಯೋಜನೆಯಡಿಯಲ್ಲಿ ನಗರದ ಅಭಿವೃದ್ದಿ ಸೇರಿದಂತೆ ವಿವಿಧ ಯೋಜನೆಯಡಿ ಕಾರ್ಯಕ್ರಮಗಳನ್ನು ರೂಪಿಸಲು ನಿಗಧಿಯಾಗಿರುವ 5.66 ಕೋಟಿ ರೂ.ಗಳ ಅನುದಾನ ಬಳಕೆ ವಿಶೇಷ ಸಭೆಯಲ್ಲಿ ಅನುಮೋದನೆ ದೊರೆಯಿತು.
ನಗರದ ನಗರಸಭೆಯ ವಿಶೇಷ ಸಭೆಯು ಜಿಲ್ಲಾಧಿಕಾರಿಗಳು ಹಾಗು ನಗರಸಭೆ ಆಡಳಿತಾಧಿಕಾರಿ ಶಿಲ್ಪನಾಗ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆದು. ನಗರಸಭಾ ಸದಸ್ಯರು ವಿವಿಧ ಯೋಜನೆಗಳಡಿಯಲ್ಲಿ ನಗರಸಭೆ ಅಭಿವೃದ್ದಿ ಹಾಗು ವಿವಿಧ ಸವಲತ್ತುಗಳನ್ನು ನೀಡುವ ಕುರಿತು ಸಭೆಯಲ್ಲಿ ಮಂಡಿಸಿ, ಚರ್ಚೆ ನಡೆದು ಅನುಮೋದನೆ ಪಡೆದುಕೊಂಡರು.
ನಗರಸಭೆಯ 15ನೇ ಹಣಕಾಸು ಯೋಜನೆಯಡಿ ನಗರಸಭೆಯ 31 ವಾರ್ಡುಗಳಿಗೆ ಬಿಡುಗಡೆಯಾಗಿರುವ 417 ಲಕ್ಷ ರೂ.ಗಳ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಿ, ಚರ್ಚೆಯ ಬಳಿಕ ಜಿಲ್ಲಾಧಿಕಾರಿ ಅನುಮೋದನೆ ನೀಡಿದರು. ರಾಜ್ಯ ಹಣಕಾಸು ಆಯೋಗದ ಬಂಡವಾಳ ಅಸ್ತಿ ಸಂಜೇತ ಕಾರ್ಯಕ್ರಮದಲ್ಲಿ 105 ಲಕ್ಷ ರೂ., ಎಸ್‍ಇಪಿ ಯೋಜನೆಯಡಿಯಲ್ಲಿ 31 ಲಕ್ಷ ರೂ. ಹಾಗೂ ಟಿಎಸ್‍ಪಿ ಯೋಜನೆಯಡಿಯಲ್ಲಿ 13 ಲಕ್ಷ ರೂ.ಗಳ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕೆಲವು ಮಾರ್ಪಾಡುಗಳೊಂದಿಗೆ ಅನುಮೋದನೆಯನ್ನು ಸಭೆಯಲ್ಲಿ ಹಾಜರಿದ್ದ ಸದಸ್ಯರು ಅನುಮೋದನೆ ಕೊಟ್ಟರು.
ಜಿಲ್ಲಾಧಿಕಾರಿ ಶಿಲ್ಪನಾಗ್ ಮಾತನಾಡಿ, ನಗರದ ಅಭಿವೃದ್ದಿಯನ್ನು ಎಲ್ಲರು ಗುರಿಯಾಗಿಸಿಕೊಂಡು ಯೋಜನೆಗಳನ್ನು ರೂಪಿಸಬೇಕಾಗಿದೆ. ನಗರೋತ್ಥಾನೆ ಯೋಜನೆ ಪೂರ್ಣ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವಲ್ಲಿ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾ ಕೇಂದ್ರವಾಗಿರುವ ಕಾರಣದಿಂದ ಎಲ್ಲರ ಗಮನ ನಗರಸಭೆ ಮೇಲಿದೆ. ಪೌರಾಯುಕ್ತರು ಹೆಚ್ಚಿನ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಿಬ್ಬಂದಿ ಕೊರತೆಯನ್ನು ನಿಭಾಯಿಸಿಕೊಂಡು ಕಾರ್ಯಕ್ರಮ ರೂಪಿಸಲು ಮುಂದಾಗಬೇಕು. ನಗರಸಭೆ ಎಲ್ಲಾ ವಾರ್ಡುಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಂದಾಗಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ರಾಮದಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರ ನಟರಾಜು, ಕಂದಾಯ ನಿರೀಕ್ಷಕ ಸರವಣ, ಪರಿಸರ ಇಂಜಿನಿಯರ್ ಗಿರಿಜಾ, ಕಾರ್ಯಕ್ರಮ ಸಂಯೋಜಕ ವೆಂಕಟನಾಯಕ, ಸದಸ್ಯರಾದ ಆರ್.ಎಂ. ರಾಜಪ್ಪ, ಆರ್.ಪಿ. ನಂಜುಂಡಸ್ವಾಮಿ, ಮಹೇಶ್, ಅಬ್ರಾರ್, ಅಹಮದ್,ಕಲೀಂ, ಮಹಮದ್ ಅಮೀಕ್, ಕಲಾವತಿ, ನೀಲಮ್ಮ, ಭಾಗ್ಯಮ್ಮ, ಚಂದ್ರಕಲಾ, ಶಾಂತಿ ಮೊದಲಾದವರು ಇದ್ದರು.