ಶಿಸ್ತಿನ ಸಿಪಾಯಿಗಳ ನಿರ್ಮಾಣದಲ್ಲಿ ಭಾರತ ಸೇವಾದಳದ ಕಾರ್ಯ ಶ್ಲಾಘನೀಯ : ಡಾ. ಅಶೋಕ ಜಾಧವ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.17: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮನೋಭಾವ ಬೆಳೆಸಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಭಾರತ ಸೇವಾದಳ ಶ್ರಮಿಸುತ್ತಿದೆ ಎಂದು ಡಾ. ಅಶೋಕ ಜಾಧವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಭಾರತ ಸೇವಾದಳ ಜಿಲ್ಲಾ ಸಮಿತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಇವರುಗಳ ಸಹಯೋಗದಲ್ಲಿ ನಗರದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ನಂಬರ್- 24 ರಲ್ಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ ಹಾಗೂ ಭಾರತ ಸೇವಾದಳ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಸ್ತು, ಪ್ರಾಮಾಣಿಕತೆಯೊಂದಿಗೆ ಇಂದಿನ ಯುವ ಜನಾಂಗವನ್ನು ದೇಶದ ಸಂಪತ್ತಿಗಾಗಿ ಬೆಳೆಸುವಲ್ಲಿ ಭಾರತ ಸೇವಾದಳ ಸಹಕಾರಿಯಾಗಿದೆ. ಗಾಂಧೀಜಿಯವರ ತತ್ವ ಆದರ್ಶಗಳನ್ನು ಮುಂದಿಟ್ಟುಕೊಂಡು ಧೈರ್ಯ, ಸಂಯಮ, ತ್ಯಾಗ ಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕೆಲಸವನ್ನು ಭಾರತ ಸೇವಾದಳ ಮಾಡುತ್ತಿದೆ. ಯುವ ಜನಾಂಗವನ್ನು ಈ ದೇಶದ ಸಂಪತ್ತಾಗಿ ಮಾಡುವಲ್ಲಿ ಸೇವಾದಳದ ಕಾರ್ಯ ಶ್ಲಾಘನೀಯ ಎಂದರು.
ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ನಮ್ಮಲ್ಲಿ ಪರಿಶ್ರಮ ಮತ್ತು ಪ್ರಯತ್ನ ಇರಲೇಬೇಕು. ಈ ನಿಟ್ಟಿನಲ್ಲಿ ಭಾರತ ಸೇವಾದಳವು ನಮಗೆ ಶಿಸ್ತು, ಸಂಯಮ, ತ್ಯಾಗದೊಂದಿಗೆ ಪರಿಶ್ರಮ ಮತ್ತು ಪ್ರಯತ್ನವನ್ನು ಕಲಿಸುತ್ತದೆ ಎಂದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಸುವಿಧಾ ಸಂಸ್ಥೆಯ ಅಧ್ಯಕ್ಷರು, ಲಯನ್ಸ್ ಕ್ಲಬ್ಲ್‍ನ ಮಾಜಿ ಅಧ್ಯಕ್ಷರು ಹಾಗೂ ಸಮಾಜ ಸೇವಕ ಫಯಾಜ್ ಕಲಾದಗಿ ಮಾತನಾಡಿ, ಭಾರತ ಸೇವಾದಳದಿಂದ ಒಗ್ಗಟ್ಟು ಪ್ರದರ್ಶನ ಸಾಧ್ಯವಿದೆ. ಜನರಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಹುಟ್ಟಿಕೊಂಡ ಸಂಘಟನೆ ಇದಾಗಿದೆ. ಇಲ್ಲಿ ಯಾವುದೇ ರಾಜಕೀಯ ಇಲ್ಲದೆ ಅಚ್ಚುಕಟ್ಟಾಗಿ ನಡೆಯುತ್ತಿದೆ, ಪ್ರತಿ ಶಾಲಾ ಕಾಲೇಜುಗಳಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸಲು ದೇಶದ ಇತಿಹಾಸವನ್ನು ತಿಳಿಸುವ ಕೆಲಸ ಸಂಘಟನೆಯಿಂದ ಆಗಬೇಕಾಗಿದೆ. ರಾಷ್ಟ್ರದ ಹಿತಾಸಕ್ತಿಗಾಗಿ ಸಂಘಟನೆಗಳ ಅವಶ್ಯಕತೆ ಇದೆ. ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸುವ ಮೂಲಕ ಭಾವೈಕ್ಯತೆಯನ್ನು ಹುಟ್ಟಿ ಹಾಕುವ ಕೆಲಸವನ್ನು ಭಾರತ ಸೇವಾದಳ ಮಾಡುತ್ತಿದೆ. ರಾಷ್ಟ್ರಭಕ್ತಿ, ರಾಷ್ಟ್ರ ಪ್ರೇಮವನ್ನು ಜೀವನದಲ್ಲಿ ಬೆಳೆಸಿಕೊಳ್ಳುವ ಮೂಲಕ ದೇಶಕ್ಕಾಗಿ ನಾನೇನು ಕೊಡಬಲ್ಲೆ ಎನ್ನುವುದು ಮುಖ್ಯವಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಸ್.ಪಿ. ಬಿರಾದಾರ (ಕಡ್ಲೇವಾಡ) ಮಾತನಾಡಿ, ಹಿಂದುಸ್ತಾನಿ ಸೇವಾದಳವನ್ನು ಭಾರತ ಸೇವಾದಳವನ್ನಾಗಿ ಪರಿವರ್ತಿಸಿದವರು ನಾ,ಸು, ಹರ್ಡಿಕರ್ ಆಗಿದ್ದಾರೆ, ಭಾವೈಕ್ಯತೆ ರ್ಯಾಲಿಗಳಂತಹ ಹಲವು ಸೇವಾ ಕಾರ್ಯಕ್ರಮಗಳನ್ನು ಭಾರತ ಸೇವಾದಳದ ಮೂಲಕ ಹಮ್ಮಿಕೊಂಡು ಮಕ್ಕಳಲ್ಲಿ ಶಿಸ್ತು, ತ್ಯಾಗ ಮನೋಭಾವ, ಧೈರ್ಯದಂತಹ ಗುಣಗಳನ್ನು ಬೆಳೆಸುವ ಕೆಲಸ ಸೇವಾದಳದಿಂದ ಆಗುತ್ತಿz ಎಂದರು.
ಕಾರ್ಯಕ್ರಮದಲ್ಲಿ ಸಾಧಿಕ್ ಜಾನವೇಕರ, ಶಾಲಾ ಮುಖ್ಯಗುರು ವಿ, ಆರ್, ಹಾಲವರ ಇನ್ನೂ ಹಲವರು ಉಪಸ್ಥಿತರಿದ್ದರು.
ಭಾರತ ಸೇವಾದಳದ ವಲಯ ಸಂಘಟಿಕ ನಾಗೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜ್ಯ ಸಂಪನ್ಮೂಲ ಶಿಕ್ಷಕ ಸೋಮಶೇಖರ ರಾಠೋಡ ನಿರೂಪಿಸಿದರು, ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಎಸ್.ಎಲ್. ರಾಠೋಡ ವಂದಿಸಿದರು.