ಥ್ರೋಬಾಲ್ ಚಾಂಪಿಯನ್ ಶಿಪ್ ಚಿನ್ನ ಗೆದ್ದ ಕರ್ನಾಟಕ ಮಹಿಳಾ ತಂಡ
ಬೆಂಗಳೂರು, ಜು. ೧೬- ಕೇಂದ್ರ ಸರ್ಕಾರದ ನೀತಿ ಆಯೋಗ, ಫಿಟ್ ಇಂಡಿಯಾ ಮತ್ತು ಕೇಂದ್ರದ ಎಂಎಸ್‌ಎಂಇ ಸಹಯೋಗದಲ್ಲಿ ನೇಪಾಳದಲ್ಲಿ ಆಯೋಜಿಸಿದ್ದ ಚಾಂಪಿಯನ್ ಶಿಪ್‌ನಲ್ಲಿ ಭಾರತದಿಂದ ಪ್ರತಿನಿಧಿಸಿದ ಕರ್ನಾಟಕ ತಂಡ ಚಿನ್ನಗೆದ್ದಿದೆ.
ನೇಪಾಳದಲ್ಲಿ ನಡೆದ ಶಹೀದ್ ಭಗತ್ ಸಿಂಗ್ ಇಂಡೋ ನೇಪಾಳ್ ೨೦೨೪ರ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ಥ್ರೋಬಾಲ್ ತಂಡವನ್ನು ಕೇಂದ್ರ ಸರ್ಕಾರ ನೇಪಾಳ್ ಚಾಂಪಿಯನ್ ಶಿಪ್‌ಗೆ ಆಯ್ಕೆ ಮಾಡಿತ್ತು. ರಾಜ್ಯದ ಥ್ರೋಬಾಲ್ ಕೋಚ್ ಸಂತೋಷ್ ರವರ ನೇತೃತ್ವದಲ್ಲಿ ಕರ್ನಾಟಕದ ಸೀನಿಯರ್ಸ್ ಮತ್ತು ಜ್ಯೂನಿಯರ್ಸ್ ಸ್ಪರ್ಧಿಸಿದ್ದರು.
ಹನ್ನೆರಡು ಜನರ ತಂಡವನ್ನು ಸೀನಿಯರ್ ಕ್ಯಾಟಗರಿಯಲ್ಲಿ ಕ್ಯಾಪ್ಟನ್ ದಿವ್ಯ ಮುನ್ನಡೆಸಿದರೆ, ದೀಪ ಮತ್ತು ಅನಿತಾ ಸೀನಿಯರ್ಸ್ ಆಗಿ ಸಾಥ್ ನೀಡಿದ್ದರು.ಇನ್ನು ಜ್ಯೂನಿಯರ್ಸ್ ವಿಭಾಗದಲ್ಲಿ ಯಲಹಂಕದ ಸಂಪಿಗೆಹಳ್ಳಿ ಖಾಸಗಿ ಶಾಲೆಯ ಋಷತಿ, ಜ್ಞಾನವಿ ಮತ್ತು ಕಾವ್ಯ ಚಾಂಪಿಯನ್ ತಂಡದ ಭಾಗವಾಗಿದ್ದರು .ಹಾಗೆಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜ್ಯೂನಿಯರ್ಸ್ ವಿಭಾಗದಲ್ಲಿ ನಿತ್ಯ, ಕೀರ್ತನ, ರವೀನಾ, ದೀಕ್ಷಾ ಜೈನ್, ಚವಿ ಜೈನ್ ಮತ್ತು ಐಲರ ಸೇರಿದಂತೆ ೧೨ ಜನರನ್ನೊಳಗೊಂಡ ತಂಡ ನೇಪಾಳ ತಂಡ ಸೋಲಿಸಿ ಚಿನ್ನ ಗೆದ್ದಿದೆ.
ಕರ್ನಾಟಕ ಮೂಲಕ ಭಾರತ ಪ್ರತಿನಿಧಿಸಿದ ತಂಡ ಶಹೀದ್ ಭಗತ್ ಸಿಂಗ್ ಥ್ರೋಬಾಲ್ ಚಾಂಪಿಯನ್ ಶಿಪ್ ಗೆಲ್ಲಲು ರಾಜ್ಯದ ಥ್ರೋಬಾಲ್ ಕೋಚ್ ಸಂತೋಷ್‌ರವರ ಶ್ರಮ ದೊಡ್ಡದು ಅಂತಾರೆ. ಚಾಂಪಿಯನ್ ಥ್ರೋಬಾಲ್ ತಂಡದ ಪ್ರತಿಯೊಬ್ಬ ಸದಸ್ಯರು.
ಸನ್ಮಾನ: ನ್ಯಾಷನಲ್ ಥ್ರೋಬಾಲ್ ಚಾಂಪಿಯನ್ಸ್ ತಂಡಕ್ಕೆ ಯಲಹಂಕದ ಸಂಪಿಗೇಹಳ್ಳಿಯ ವೆಂಕಟೇಶ್ವರ ಬಡಾವಣೆಯ ಆಂಜನೇಯ ದೇವಾಲಯದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಇದೇ ವೇಳೆ ಆಂಜನೇಯ ದೇವಸ್ಥಾನದ ಧರ್ಮದರ್ಶಿ ವೆಂಕಟೇಶ್ವರನಗರದ ನಾಗರಾಜಪ್ಪ, ಮುನೇಗೌಡ- ಅಂಜು ದಂಪತಿ ಚಾಂಪಿಯನ್ ತಂಡಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ಇದೇ ವೇಳೆ ಚಾಂಪಿಯನ್ ತಂಡದಲ್ಲಿನ ಶಾಲಾ ವಿದ್ಯಾರ್ಥಿನಿಯರಾದ ಜ್ಞಾನವಿ ಪೋಷಕರು, ಋಷತಿ ಪೋಷಕರು ಮತ್ತು ಕಾವ್ಯ ಪೋಷಕರು ಹಾಜರಿದ್ದರು.ಸನ್ಮಾನ ಮಾಡಿದವರು, ಗೌರವ ಸ್ವೀಕರಿಸಿದ ಪ್ರತಿಭೆಗಳು ಮತ್ತು ಪೋಷಕರು ರಾಜ್ಯದ ಗ್ರಾಮೀಣ ಮತ್ತು ನಗರದ ಕ್ರೀಡಾಪಟುಗಳಿಗೆ ಮತ್ತಷ್ಟು ಅವಕಾಶ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.