7 ಬಾರಿ ಗೆದ್ದರೂ ನನಗೆ ಸಚಿವ ಸ್ಥಾನದ ವಂಚನೆ: ಬಿಜೆಪಿ ಮುಖಂಡರ ವಿರುದ್ಧ ಹರಿ ಹಾಯ್ದ ಜಿಗಜಿಣಗಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.17:ಚುನಾವಣೆ ಮುಗಿದ ನಂತರ ಜನರು ಹಾಗೂ ಕಾರ್ಯಕರ್ತರನ್ನು ಮರೆಯುತ್ತೇನೆಂಬ ಭಾವನೆ ಬೇಡ. ಸಾಯುವರೆಗೂ ನಿಮ್ಮ ಜೊತೆಗೆ ಇರುತ್ತೇನೆಂದು ಸಂಸದ ರಮೇಶ ಜಿಗಜಿಣಗಿ ಭಾವುಕರಾಗಿ ನುಡಿದರು.
ಮಂಗಳವಾರ ನಗರದ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ, ನೂತನ ಸಂಸದರಿಗೆ ಸನ್ಮಾನ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಳೆದ 45 ವರ್ಷಗಳಿಂದ ಜಿಲ್ಲೆಯಲ್ಲಿ ರಾಜಕೀಯದಲ್ಲಿ ಯಾರೊಂದಿಗೂ ಕೆಟ್ಟದಾಗಿ ವ್ಯವಹರಿಸದೇ ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದರು.
ಚುನಾವಣೆ ಸಂದರ್ಭ ಯಾರಿಗೂ ಒಂದು ನಯಾಪೈಸೆ ಕೊಡೆದೆ ಪುಕ್ಸಟ್ಟೆಯಾಗಿ ನಿಮ್ಮ ಬಳಿ ಕೆಲಸ ಮಾಡಿಸಿಕೊಂಡಿದ್ದೇನೆಯಾದರೂ ಮುಂದಿನ 5 ವರ್ಷಗಳ ಕಾಲ ನಿಮ್ಮ ಕೆಲಸವನ್ನು ಯಾರಿಂದಲೂ ಏನು ಅಪೇಕ್ಷೆ ಪಡದೇ ನಿಮ್ಮ ಕೆಲಸವನ್ನು ಪುಕ್ಸಟ್ಟೆಯಾಗಿ ಮಾಡಿ ಕೊಡುವುದಾಗಿ ಹೇಳಿದರು.
2004 ರಲ್ಲಿ ಬಿಜೆಪಿ ಸೇರಿದ ದಿನದಿಂದ ಇಂದಿನವರೆಗೂ ಪಕ್ಷಕ್ಕೆ ಪ್ರಾಮಾಣಿವಾಗಿದ್ದೇನೆ. ಆದರೆ ನನ್ನ ಅನುಭವÀ ಹಂಚಿಕೊಳ್ಳಲು ಪಕ್ಷದ ಮುಖಂಡರು ಮಾಡುತ್ತಿಲ್ಲ. ಅಧಿಕಾರÀ ಬೇಕೆಂದು ಯಾರ ಮನೆಗೂ ಹೋಗಿಲ್ಲ. ಇಡೀ ದಕ್ಷಿಣ ಭಾರತದಲ್ಲಿ ಸತತವಾಗಿ 7 ಬಾರಿ ದಲಿತ ಸಂಸದನಾಗಿ ಗೆದ್ದು ಬರುತ್ತಿದ್ದರೂ, ಈ ಬಾರಿಯ ಕೇಂದ್ರ ಸರ್ಕಾರದ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗಲಿಲ್ಲ. ಅದಕ್ಕೆ ರಾಜ್ಯ ಮುಖಂಡರು ನನ್ನ ಹೆಸರು ಹೇಳಿಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಸಂದರ್ಭ ನನ್ನ ವಿರುದ್ಧ ಅಪಪ್ರಚಾರ ಮಾಡಿದರೂ ಜಿಲ್ಲೆಯ ಜನತೆ ನನ್ನ ಕೈ ಬಿಡಲಿಲ್ಲ. ನಾನು ಸತ್ತರೂ ನಿಮಗೆ ಮತ ಹಾಕುವುದಾಗಿ ಹೇಳಿದರು. ಈ ರೀತಿ ಜಿಲ್ಲೆಯ ಜನತೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರಿಂದ ಸತತವಾಗಿ ಜಯ ಗಳಿಸುತ್ತ ಬಂದಿದ್ದೇನೆಂದರು.
ಇನ್ನೇನು ರಾಜ್ಯ ಸರ್ಕಾರ ಬಹಳ ದಿನ ಉಳಿಯಲ್ಲ. ದಲಿತರ ಹಣ ತಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಪಾಪ ಹತ್ತಲಿದೆ. ತಮ್ಮದೇನು ತಪ್ಪಿಲ್ಲದಿದ್ದರೆ ಹಗರಣವನ್ನು ಸಿಬಿಐಗೆ ಕೊಡಲಿ ಎಂದು ಸವಾಲು ಹಾಕಿದರು.
ರಾಜ್ಯ ಉಪಾಧ್ಯಕ್ಷ ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಗೂ ಯಾರು ಅಭ್ಯರ್ಥಿ ಎಂದು ಅಭಿಪ್ರಾಯ ಪಡೆಯಲು ಬಂದಾಗ ಶೇ.99 ರಷ್ಟು ಕಾರ್ಯಕರ್ತರು ರಮೇಶ ಜಿಗಜಿಣಗಿ ಅವರೇ ನಮ್ಮ ಮುಂದಿನ ಅಭ್ಯರ್ಥಿಯಾಗಬೇಕು ಎಂದು ಹೇಳಿದರು. ಜಾತಿ,ಬೇಧ ಮರೆತು ನಿರಂತರ ಕಾರ್ಯಕರ್ತರ ಸಂಪರ್ಕದಲ್ಲಿ ಇದ್ದಾಗ ಸಂಸದ ರಮೇಶ ಜಿಗಜಿಣಗಿ ಅವರಂತೆ 7 ಬಾರಿ ಸತತವಾಗಿ ಸಂಸದರಾಗಲು ಸಾಧ್ಯ ಎಂದರು.
ಮುಂಬರುವ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಚುನಾವಣೆ ನಡೆಯಲಿದ್ದು, ಜಿಲ್ಲೆಯ ಎಲ್ಲ ಕಾರ್ಯಕರ್ತರು ತಯಾರಿಗೆ ಸಿದ್ಧರಾಗೋಣ ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ಆರ್.ಎಸ್.ಪಾಟಿಲ ಕೂಚಬಾಳ ಮಾತನಾಡಿ, ಹಿಂದುತ್ವದ ಬಗ್ಗೆ ಟೀಕಿಸಿರುವ ರಾಹುಲ್ ಗಾಂಧಿ ಮಾನಸಿಕ ಸ್ಥಿತಿ ಸರಿಯಿಲ್ಲ. ಅವರಿಗೆ ಕೇವಲ ಅಧಿಕಾರದ ದಾಹ ತುಂಬು ತುಳುಕುತ್ತಿದೆ. ಪ್ರಧಾನಿ ಮೋದಿ ಈಗ ಭಾರತಕ್ಕೆ ಅಷ್ಟೇ ಅಲ್ಲ ವಿಶ್ವಕ್ಕೆ ಬೇಕಾಗಿದ್ದಾರೆ. ಅವರಿಂದಲೇ ಶಾಂತಿ ನೆಲಸಲು ಸಾಧ್ಯ ಎಂದು ವಿಶ್ವದ ನಾಯಕರಿಗೆ ತಿಳಿದಿದೆ ಎಂದರು.
ರಾಜ್ಯದ ಸರ್ಕಾರದ ಸಾಲು-ಸಾಲು ಹಗರಣದಲ್ಲಿ ಮುಳುಗಿದೆ. ಸಚಿವರ ಬಂಧನವಾಗಿದೆ. ಮುಖ್ಯಮಂತ್ರಿಗಳ ಬಂಧನವಾಗೂವರೆಗೂ ಹೋರಾಟ ನಿಲ್ಲಲ್ಲ. ಮುಂದೆ ಯಾವಾಗ ಬೇಕಾದರೂ ವಿಧಾನಸಭೆ ಚುನಾವಣೆ ನಡೆದರೂ ಅಚ್ಚರಿಯಿಲ್ಲ. ಅದಕ್ಕೆ ಕಾರ್ಯಕರ್ತರು ಈಗಲೇ ಸಿದ್ಧಗೊಳ್ಳಬೇಕೆಂದು ಹೇಳಿದರು.
ವೇದಿಕೆಯ ಮೇಲೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ, ರಮೇಶ ಭೂಸನೂರ, ಅರುಣ ಶಹಾಪುರ, ಮುಖಂಡರಾದ ಸಂಜೀವ ಐಹೊಳೆ, ವಿಜಯಕುಮಾರ ಪಾಟೀಲ, ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಗೋಪಾಲ ಘಟಕಾಂಬಳೆ, ಸಪ್ನಾ ಕಣ್ಮುಚ್ಚಿನಾಳ, ಮುಳುಗೌಡ ಪಾಟೀಲ, ಈರಣ್ಣ ರಾವೂರ, ಸಾಬು ಮಾಶಾಳ, ವಿವೇಕಾನಂದ ಡಬ್ಬಿ, ಸಿದ್ಧಗೊಂಡ ಬಿರಾದಾರ, ಚಂದ್ರಶೇಖರ ಪಾಟೀಲ ಸೇರಿದಂತೆ ಪದಾಧಿಕಾರಿಗಳು, ಪಾಲಿಕೆ ಸದಸ್ಯರು ಕಾರ್ಯಕರ್ತರು ಹಾಜರಿದ್ದರು.