ತಿಂಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗದಿದ್ದರೆ ಬೀದಿ ಹೋರಾಟ
ಕಲಬುರಗಿ:ಜು.16: ಮೂವತ್ತು ದಿನಗಳಲ್ಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸದೇ ಹೋದಲ್ಲಿ ವಾರ್ಡ್‍ವಾರು ಬೀದಿಗಿಳಿದು ಹೋರಾಟ ರೂಪಿಸಲಾಗುವುದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಹಾಗೂ ನ್ಯಾಯವಾದಿ ಎಂ.ಎ. ಖದೀರ್ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸ್ವಚ್ಛ ಕುಡಿಯುವ ನೀರು ಪೂರೈಕೆ ಸಮಸ್ಯೆ ಹಲವಾರು ವರ್ಷಗಳಿಂದ ಇದ್ದರೂ ಸಹ ಇಲ್ಲಿಯವರೆಗೂ ಸಮಸ್ಯೆಗಳನ್ನು ಇತ್ಯರ್ಥಪಡಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರಕ್ಕೆ 24 ಗಂಟೆ ನೀರು ಸರಬರಾಜು ಮಾಡಲು ಯೋಜನೆ ಜಾರಿಯಲ್ಲಿದೆ. 55 ವಾರ್ಡ್‍ಗಳಲ್ಲಿ ಕೇವಲ 11 ವಾರ್ಡ್‍ಗಳಲ್ಲಿ ಮಾತ್ರ ಯೋಜನೆ ಜಾರಿಯಲ್ಲಿದೆ. ಉಳಿದ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿದೆ. ಈಗಾಗಲೇ ಕುಡಿಯುವ ನೀರಿನ ಜವಾಬ್ದಾರಿಯನ್ನು ಎಲ್ ಆಂಡ್ ಟಿ ಕಂಪೆನಿಗೆ ವಹಿಸಿ ಕೊಟ್ಟ ಮೇಲೆಯೂ ಕೂಡ ಒಂದು ವಾರದಲ್ಲಿ ಒಂದು ಸಲ, ಮತ್ತೊಮ್ಮೆ ಎರಡು ಸಲ ನೀರು ಪೂರೈಕೆ ಮಾಡಲಾಗುತ್ತಿದೆ. ಅದೂ ಪೂರೈಕೆಯಾಗುತ್ತಿರುವ ನೀರು ಕಲುಷಿತವಾಗಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಪೂರೈಕೆಯ ನೀರು ಅಡಿಗೆ ಬಳಕೆಗೂ, ಕುಡಿಯಲೂ ಸಹ ಯೋಗ್ಯವಾಗಿಲ್ಲ. ಇದರಿಂದಾಗಿ ಸಾರ್ವಜನಿಕರು ಪ್ರತಿ ದಿನ ಕುಡಿಯುವ ನೀರಿಗಾಗಿ 60ರೂ.ಗಳಿಂದ 100ರೂ.ಗಳನ್ನು ವೆಚ್ಚ ಮಾಡುವಂತಹ ಪರಿಸ್ಥಿತಿ ಬಂದಿದೆ. ನೀರಿನ ಕರ ಪ್ರತಿ ತಿಂಗಳು 175ರೂ.ಗಳನ್ನು ಸರ್ಕಾರಕ್ಕೆ ಜಮೆ ಮಾಡಿದರೆ ಕೇವಲ ಒಂದು ತಿಂಗಳಲ್ಲಿ ಹತ್ತು ದಿನಗಳವರೆಗೆ ಕಲುಷಿತ ಮತ್ತು ಜೀವಕ್ಕೆ ಅಪಾಯಕಾರಿಯಾಗುವ ನೀರು ಪಡೆದುಕೊಳ್ಳುವಂತಹ ಸ್ಥಿತಿಯಲ್ಲಿದ್ದಾರೆ. ಇದರಿಂದಾಗಿ ನೀರು ಜನರಿಗೆ ದುಬಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳ ಸಭೆ ಕರೆದು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು. ಒಂದು ವೇಳೆ ಮೂವತ್ತು ದಿನಗಳಲ್ಲಿ ಸಮಸ್ಯೆ ಪರಿಹಾರವಾಗದೇ ಹೋದಲ್ಲಿ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಈಗಾಗಲೇ ಇಂದಿರಾ ಕ್ಯಾಂಟಿನ್ ಆರಂಭಿಸಬೇಕು ಎಂಬ ಒತ್ತಾಯಕ್ಕೆ ರಾಜ್ಯ ಸರ್ಕಾರವು ಸ್ಪಂದಿಸಿದ್ದು ಸ್ವಾಗತಾರ್ಹ. ನೀರಿನ ಸಮಸ್ಯೆಗೂ ಸಹ ಕೂಡಲೇ ಸ್ಪಂದಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಿದ್ದಣ್ಣ ಚಕರಾ, ಮುಬೀನ್ ಅಹ್ಮದ್, ಸೈಯದ್ ಮುನೀರ್ ಹಾಶ್ಮಿ, ಬಾಬಾಸಾಹೇಬ್ ಹುಂಡೇಕಾರ್, ಸೈಯದ್ ನಸೀರುದ್ದೀನ್ ಮುಂತಾದವರು ಉಪಸ್ಥಿತರಿದ್ದರು.