ಜು. 18ರಂದು ರಾಜ್ಯ ಮಟ್ಟದ ರಂಗ ಪ್ರಶಸ್ತಿ ಪ್ರದಾನ
ಕಲಬುರಗಿ:ಜು.16: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜು. 18ರಂದು ಬೆಳಿಗ್ಗೆ 10-30ಕ್ಕೆ ಶ್ರೀ ಎಸ್.ಬಿ. ಜಂಗಮಶೆಟ್ಟಿ ಮತ್ತು ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ರಂಗಸಂಗಮ ಕಲಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾನಿಧ್ಯವನ್ನು ಸೇಡಂ ಕೊತ್ತಲ ಬಸವೇಶ್ವರ್ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಸದಾಶಿವ ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ವಿ. ಹಲಸೆ ಅವರು ವಹಿಸುವರು. ಕರ್ನಾಟಕ ನಾಟಕ ಅಕ್ಯಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು ಬಳ್ಳಾರಿಯ ಪುರುಷೋತ್ತಮ್ ಹಂದ್ಯಾಳ್ ಅವರಿಗೆ ಶ್ರೀ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ಹಾಗೂ ಶಿಗ್ಗಾಂವ್‍ದ ಶ್ರೀಮತಿ ರಾಧಿಕಾ ವಿ. ಬೇವಿನಮಟ್ಟಿ ಅವರಿಗೆ ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ಅವರಿಗೆ ರಂಗ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಚಿಂಚೋಳಿಯ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶ ಜಾರಿಕಾರ ಮಹಾದೇವ್ ಎಂ. ಹಂಗರಗಿ ಅವರು ಪ್ರಶಸ್ತಿ ಪುರಸ್ಕøತರ ಕುರಿತು ಶ್ರೀ ಎಸ್.ಬಿ. ಜಂಗಮಶೆಟ್ಟಿ ಮತ್ತು ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ಅವರು ಕುರಿತು ಮಾತನಾಡುವರು. ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಅವರು ಮಾತನಾಡುವರು. ರಂಗಸಂಗಮ ಕಲಾವೇದಿಕೆಯ ಅಧ್ಯಕ್ಷೆ ಶ್ರೀಮತಿ ಶಿವಗೀತಾ ಬಸವಪ್ರಭು ಅವರು ಉಪಸ್ಥಿತರಿರುವರು. ಶ್ರೀಧರ್ ಹೊಸಮನಿ ಹಾಗೂ ಸಂಗಡಿಗರು ಗೀತಗಾಯನ ನೆರವೇರಿಸುವರು ಎಂದು ಅವರು ಹೇಳಿದರು.
ಪ್ರಶಸ್ತಿಗೆ ಆಯ್ಕೆಯಾಗಿರುವ ಪುರುಷೋತ್ತಮ್ ಹಂದ್ಯಾಳ್ ಅವರು ಮೂಲತ: ಬಳ್ಳಾರಿ ಜಿಲ್ಲೆಯ ಹಂದ್ಯಾಳದ ಅಪ್ಪಟ ಗ್ರಾಮೀಣ ಪ್ರತಿಭೆ. ವೃತ್ತಿಯಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿದ್ದ ಅವರು ಮೂವತ್ತುಮೂರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಶಾಲಾ ದಿನಗಳಲ್ಲಿಯೇ ರಂಗಭೂಮಿ ಪ್ರವೇಶಿಸಿದರು. ಕುರುಕ್ಷೇತ್ರ, ಧನಿಕರ ದೌರ್ಜನ್ಯ, ಕರ್ತವ್ಯದ ಕಾಣಿಕೆ, ಮಹಿಮಾಪುರ, ಕುಂಕುಮ ತಂದ ಕೈಲಾಸ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಕ್ತರಾತ್ರಿ ನಾಟಕದಲ್ಲಿ ಶಕುನಿ ಪಾತ್ರದಲ್ಲಿ ವಿಶಿಷ್ಟ ಅಭಿನಯಕ್ಕೆ ಅಭಿನವ ಶಕುನಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ ಎಂದು ಅವರು ಹೇಳಿದರು.
ಬಳ್ಳಾರಿಯ ಕಾರಾಗೃಹದ ಖೈದಿಗಳ ಮನಪರಿವರ್ತನೆಗಾಗಿ ಖೈದಿಗಳಿಗಾಗಿ ನಾಟಕ ನಿರ್ದೇಶನ ಮಾಡಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ಜನಜಾಗೃತಿಗಾಗಿ ಕಿರುಚಿತ್ರ ನಿರ್ಮಿಸಿ ಅಭಿನಯಿಸಿದ್ದಾರೆ. ಕನ್ನಡದ ನಾಲ್ಕು ಧಾರವಾಹಿಗಳಲ್ಲಿಯೂ ಸಹ ಪುರುಷೋತ್ತಮ್ ಅವರು ಅಭಿನಯಿಸಿದ್ದಾರೆ ಎಂದು ಅವರು ತಿಳಿಸಿದರು.
ಇನ್ನೋರ್ವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ರಾಧಿಕಾ ವ್ಹಿ. ಬೇವಿನಮಟ್ಟಿ ಅವರು 12ನೇ ವಯಸ್ಸಿನಲ್ಲಿ ಬಸ್ ಕಂಡಕ್ಟರ್ ನಾಟಕದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು. ಓದಿದ್ದು ಕಡಿಮೆಯಾದರೂ ಎಂತಹ ಪಾತ್ರ ಕೊಟ್ಟರೂ ಒಂದೇ ದಿನದಲ್ಲಿ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ ಅವರದು. ಮದುಮಗಳು, ಕಿತ್ತೂರು ಚೆನ್ನಮ್ಮ, ಸಂಗ್ಯಾ ಬಾಳ್ಯಾ, ಸಂಪತ್ತಿಗೆ ಸವಾಲ್, ಸಂತ ಸಕ್ಕೂಬಾಯಿ, ಜಗಜ್ಯೋತಿ ಬಸವೇಶ್ವರ್, ರೈತನ ಮಕ್ಕಳು ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡಿದ್ದಾರೆ. ಸಮರ ಸಿಂಹಿಯಿನಿ ಬೆಳವಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಮ್ಮ ಪಾತ್ರದಲ್ಲಿ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ ಎಂದು ಅವರು ಹೇಳಿದರು.
ಕಲಾವೈಭವ ಕಂಪೆನಿ, ಚಿತ್ತರಗಿ ಕಂಪೆನಿ, ಹುಚ್ಚೇಶ್ವರ್ ನಾಟ್ಯ ಸಂಘ, ಕುಮಾರೇಶ್ವರ್ ನಾಟ್ಯ ಸಂಘ, ಏಣಗಿ ಬಾಳಪ್ಪನವರ ಕಂಪೆನಿ ಹೀಗೆ ಹಲವಾರು ನಾಟಕ ಕಂಪೆನಿಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಸ್ವತ: ಕಂಪೆನಿ ಕಟ್ಟಿ ಹತ್ತು ವರ್ಷ ನಡೆಸಿದ್ದಾರೆ. ಏಣಗಿ ನಟರಾಜ್ ಅವರ ನಿರ್ದೇಶನದಲ್ಲಿ ಕಿನ್ನರಿ ಮತ್ತು ಇದು ಎಂತಾ ಲೋಕವಯ್ಯಾ ಧಾರವಾಹಿಗಳಲ್ಲಿಯೂ ಸಹ ನಟಿಸಿದ್ದಾರೆ ಎಂದು ಅವರು ತಿಳಿಸಿದರು.
ಕರ್ನಾಟಕ ನಾಟಕ ಅಕ್ಯಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ಅವರ ಅಧ್ಯಕ್ಷತೆಯಲ್ಲಿ ರಂಗಕರ್ಮಿಗಳಾದ ಎಚ್.ಎಸ್. ಬಸವಪ್ರಭು, ಶ್ರೀಮತಿ ಶಾಂತಾ ಕುಲಕರ್ಣಿ, ನಾರಾಯಣ್ ಕುಲಕರ್ಣಿ, ಬಿ.ಎಚ್. ನಿರಗುಡಿ, ಡಾ. ವಿಶ್ವರಾಜ್ ಪಾಟೀಲ್, ಶ್ರೀಮತಿ ಶಿವಗೀತಾ ಬಸವಪ್ರಭು, ಡಾ. ಸುಜಾತಾ ಜಂಗಮಶೆಟ್ಟಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಅವರು ಹೇಳಿದರು.
ಪ್ರಶಸ್ತಿ ಪುರಸ್ಕøತರಿಗೆ ತಲಾ ಹತ್ತು ಸಾವಿರ ರೂ.ಗಳ ಮೊತ್ತ ಹಾಗೂ ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ಎಚ್. ನಿರಗುಡಿ, ಎಚ್.ಎಸ್. ಬಸವಪ್ರಭು, ವಿಶ್ವನಾಥ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.