371 (ಜೆ) ಸಮಗ್ರ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಸತ್ಯಾಗ್ರಹ
ಕಲಬುರಗಿ,ಜು.16-ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಸಂವಿಧಾನದ ಪರಿಚ್ಛೇದ 371 ಜೆ ಅನ್ನು ಸಮಗ್ರ ಮತ್ತು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಸಮಿತಿ ನೇತೃತ್ವದಲ್ಲಿ ನಗರದ ಸಾರ್ವಜನಿಕ ಉದ್ಯಾನವನದ ಗಾಂಧಿ ಪ್ರತಿಮೆ ಮುಂದೆ ಸತ್ಯಾಗ್ರಹ ನಡೆಸಲಾಯಿತು.
ಸಮಿತಿ ಮುಖಂಡರಾದ ಲಕ್ಷ್ಮಣ ದಸ್ತಿ, ಪ್ರೊ.ಆರ್.ಕೆ.ಹುಡಗಿ ಮಾತನಾಡಿ 371 ಜೆ ಜಾರಿಗೆ ಬಂದು ದಶಕ ಕಳೆದರೂ ಅದರ ಅನುಷ್ಟಾನ ಮಾತ್ರ ಇನ್ನೂ ಸಮರ್ಪಕವಾಗಿಲ್ಲ. ನೇಮಕಾತಿ ಮತ್ತು ವರ್ಗಾವಣೆ ವಿಷಯದಲ್ಲಿ ಅನೇಕ ಗೊಂದಲಗಳನ್ನು ಉಂಟು ಮಾಡುತ್ತಿದೆ. ಇನ್ನು ಕಲ್ಯಾಣ ಕರ್ನಾಟಕದ ಹೊರಗಿನ ಜನ ಇದನ್ನು ವಿರೋಧಿಸುವ ಮಾತುಗಳನ್ನು ಆಡುತ್ತಿದ್ದಾರೆ ಇದು ಸರಿಯಲ್ಲವೆಂದರು.
ಕೇಂದ್ರ ಸರ್ಕಾರ 2020 ರಲ್ಲಿಯೇ ರಾಜ್ಯಕ್ಕೆ ಏಮ್ಸ್ ನೀಡುವುದಾಗಿ ಹೇಳಿತ್ತು. ಅಂದಾಜು 50 ಸಾವಿರ ಕೋಟಿ ರೂ ಅನುದಾನದ ಈ ಆಸ್ಪತ್ರೆ ಬಂದರೆ ಎಲ್ಲಾ ರೀತಿಯ ಸೌಲಭ್ಯದೊರೆಯಲಿದೆ. ಆಸ್ಪತ್ರೆ ಆರಂಭಿಸಲು ಅಗತ್ಯವಾದ ಜಮೀನು, ನೀರು ಸಂಪರ್ಕ ವ್ಯವಸ್ಥೆ ರಾಯಚೂರಿನಲ್ಲಿದೆ. ಅದಕ್ಕಾಗಿ ಅದನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಡಾ.ಬಸವರಾಜ ಕುಮ್ನೂರ, ಡಾ.ಪ್ರತಾಪ್ ಸಿಂಗ್, ಕಲ್ಯಾಣರಾವ, ಲಿಂಗರಾಜ ಸಿರಗಾಪೂರ, ಶಿವಾನಂದ, ಡಾ.ಗುರುಬಸಪ್ಪ, ಶಿವಕುಮಾರ ಪಾಟೀಲ, ಡಾ.ಮಾಜೀದ್ ದಾಗಿ, ಮೋಹನ್ ಕಟ್ಟಿಮನಿ, ರಾಜು ಜೈನ್, ಬಸವರಾಜ ಕಲ್ಯಾಣಿ, ಸೂರ್ಯಕಾಂತ, ಮಲ್ಲಿಕಾರ್ಜುನ, ಕಲ್ಯಾಣರಾವ ಪಾಟೀಲ ಸೇರಿದಂತೆ ಮತ್ತಿತರರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.