ಅತಿಥಿ ಶಿಕ್ಷಕರ, ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಒತ್ತಾಯ
ಯಾದಗಿರಿ,ಜು.16-ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ/ಉಪನ್ಯಾಸಕರಿಗೆ ಪ್ರಸ್ತುತ ನಿಡುತ್ತಿರುವ ಅತಿಥಿ ಶಿಕ್ಷಕರ 16,650/-ಹಾಗೂ ಉಪನ್ಯಾಸಕರ 18,150/-ಈ ವೇತನವನ್ನು ತಮಗೂ ಕೂಡ ಅನ್ವಯವಾಗುವಂತೆ ಹೆಚ್ಚಳ ಮಾಡುವುದರ ಮೂಲಕ ಸೇವಾ ಭದ್ರತೆ ಒದಗಿಸಬೇಕು ಎಂದು ಅ.ಮೋ.ದೇ.ವ.ಶಾಲೆ, ಮೌಲಾನ ಆಜಾದ್ ಮಾದರಿ ಶಾಲೆ ಹಾಗೂ ಕಾಲೇಜು ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ಒತ್ತಾಯಿಸಿದ್ದಾರೆ.
ಈ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿರುವ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಾದ ಆನಂದ, ರಾಹುಲ್, ಬಸವರಾಜ, ಫುರ್ಕಾನುಲ್, ಚಾಂದಪಾಶಾ, ಇಂದಿರಾ, ನರಸಿಂಹಲು, ಅಣ್ಣಪ್ಪ, ಅತಿಯಾ ಪರ್ವಿನ್, ಭೀಮಾಶಂಕರ, ಸಿದ್ದಪ್ಪ, ಮಹಾಲಕ್ಷ್ಮೀ, ಶಾಕೀರಾ ಮರಿಯಮ್, ಗೌಸಿಯಾ ಬೇಗಂ, ಶಶಿಕುಮಾರ, ಚಾಂದಪಾಶಾ ಅವರು, ಪ್ರಸ್ತುತ ನೀಡುತ್ತಿರುವ ವೇತನದಿಂದ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗುತ್ತಿದ್ದು, ಒಂದು ವಾರದೊಳಗೆ ವೇತನ ಹೆಚ್ಚಳ ಮಾಡಬೇಕು. ಈ ಬೇಡಿಕೆಗೆ ಸ್ಪಂದಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಮುಂದೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.