ರಾಜ್ಯ ಮಟ್ಟದ ವಿಶೇಷ ಸಂಗೀತ, ನೃತ್ಯ, ತಾಳ ವಾದ್ಯ ಪರೀಕ್ಷೆ ಆಯಾ ಜಿಲ್ಲಾ ಕೆಂದ್ರಗಳಲ್ಲೇ ನಡೆಯಲಿ
ಕಲಬುರಗಿ,ಜು.16-ರಾಜ್ಯ ಮಟ್ಟದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳ ವಾದ್ಯ ಪರೀಕ್ಷೆಯನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿಯೇ ನಡೆಸುವಂತೆ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯ ಪರೀಕ್ಷಾ ವಿಭಾಗಕ್ಕೆ ಸಂಗೀತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಪಾಲಕರು ಒತ್ತಾಯಿಸಿದ್ದಾರೆ.
ಈ ಕುರಿತು ಶನಿವಾರ ಜಿಲ್ಲೆಯ ಸಂಗೀತ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಪಾಲಕರು ಮಾಧ್ಯಮ ಮುಖಾಂತರ ಮನವಿ ಮಾಡಿದ್ದಾರೆ.
ಪರೀಕ್ಷಾ ವಿಭಾಗ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಶೈಕ್ಷಣಿಕ ಸಾಲಿನಿಂದ ಜುಲೈ 27, 28 ಎರಡು ದಿನಗಳ ಕಾಲ ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಮೈಸೂರು, ಮಂಗಳೂರು, ಹಾಸನ, ಬೆಂಗಳೂರು ಎರಡು ಕೇಂದ್ರ, ಹುಬ್ಬಳ್ಳಿ, ಬಾಗಲಕೋಟೆ, ಹೊನ್ನಾವರ, ಶಿರಸಿ, ಬೆಳಗಾವಿ, ತುಮಕೂರು, ಕಲಬುರಗಿ, ಬಳ್ಳಾರಿ, ಪುತ್ತೂರು, ಉಡುಪಿ ಈ 18 ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಆಯೋಜಿಸಿದೆ. ಆಗಸ್ಟ್ 16 ರಿಂದ ಪ್ರಾಯೋಗಿಕ ಪರೀಕ್ಷೆಗಳನ್ನು ಆರಂಭಿಸುತಿದ್ದು, ಲಿಖಿತ ಪರೀಕ್ಷೆ ನಡೆದ ಕೇಂದ್ರಗಳಲ್ಲಿಯೇ ಜ್ಯೂನಿಯರ್ ಹಾಗೂ ಸೀನಿಯರ್ ಪ್ರಾಯೋಗಿಕ ಪರೀಕ್ಷೆಗಳನ್ನು ಆಯೋಜಿಸಿದೆ. ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ಪ್ರಾಯೋಗಿಕ ಪರೀಕ್ಷೆಗಳನ್ನು ಮೈಸೂರು, ಬೆಂಗಳೂರು, ಧಾರವಾಡ, ದಾವಣಗೆರೆ ಹಾಗೂ ಮಂಗಳೂರು ಈ ಐದು ವಲಯಗಳಲ್ಲಿ ಆಯೋಜಿಸಿದೆ. ಇದರಿಂದ ಸಂಗೀತ ಪರೀಕ್ಷೆ ಬರೆಯುವ ನಾಡಿನ ಅನೇಕ ವಿದ್ಯಾರ್ಥಿಗಳಿಗೆ ಬಹಳ ಹೈರಾಣವಾಗಲಿದೆ. ಜೊತೆಗೆ ವಿಶೇಷವಾಗಿ ಅಂಧ ವಿದ್ಯಾರ್ಥಿಗಳು ಅತಿ ಹೆಚ್ಚು ಇರುವ ಸಂಗೀತ ಕಾಶಿ ಗದಗ ಪರೀಕ್ಷಾ ಕೇಂದ್ರವನ್ನ ಕಡೆಗಣಿಸಿರುವುದು ಬಹಳ ಖೇದದ ವಿಷಯವಾಗಿದೆ. ಅದರಲ್ಲೂ ಮಕ್ಕಳಿಗೆ ಬೇರೆ ಬೇರೆ ಜಿಲ್ಲೆಗೆ ಹೋಗಿ ಪರೀಕ್ಷೆ ಬರೆಯಲು ಕಷ್ಟಸಾಧ್ಯ. ಈ ಹಿಂದೆ ಪರೀಕ್ಷಾ ಕೇಂದ್ರಗಳು ರಾಜ್ಯದ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸುಗಮವಾಗಿ ನಡೆಯುತ್ತಿದ್ದವು. ಸಧ್ಯ ಜವಾಬ್ದಾರಿ ವಹಿಸಿಕೊಂಡಿರುವ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯ ಪರೀಕ್ಷಾ ವಿಭಾಗ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹೊಸ ಸುತ್ತೋಲೆ ಹೊರಡಿಸುವ ಮುಖಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಪರೀಕ್ಷಾ ವಿಭಾಗ ಕೈಗೊಂಡಿರುವ ಈ ನಿರ್ಧಾರವನ್ನು ಕೈಬಿಟ್ಟು ಕೂಡಲೆ ಪರೀಕ್ಷಾ ಕೇಂದ್ರಗಳನ್ನು ರಾಜ್ಯದ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಬೇಕು ಎಂದು ಪದವೀಧರರು, ನವ ಕರ್ನಾಟಕ ಸಂಗೀತ ಪದವೀಧರರ ಸಂಘದ ರಾಜ್ಯಾಧ್ಯಕ್ಷರಾದ ಬಂಡಯ್ಯ ಸ್ವಾಮೀ ಸುಂಟನೂರ ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಒತ್ತಾಯಿಸಿದ್ದಾರೆ.