ಪಾನಮತ್ತ ಶಿಕ್ಷಕನ ಅಮಾನತು
ವಿಜಯಪುರ, ಜು.16 :ಮದ್ಯಪಾನ ಮಾಡಿ ಶಾಲೆಗೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಎನ್.ಎಚ್. ನಾಗೂರ ಆದೇಶ ಹೊರಡಿಸಿದ್ದಾರೆ.
ವಿಜಯಪುರ ಗ್ರಾಮೀಣ ವಲಯದ ಬಬಲೇಶ್ವರ ತಾಲೂಕಿನ ಕಂಬಾಗಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎ.ಸಿ. ನಾರಾಯಣಪುರ ಅಮಾನತುಗೊಂಡ ಶಿಕ್ಷಕ.
ಜುಲೈ 13 ರಂದು ಬೆಳಗ್ಗೆ ಶಾಲೆಗೆ ಬಂದು ಈ ಶಿಕ್ಷಕ ಶಾಲೆಯಲ್ಲಿಯೇ ಮದ್ಯಪಾನ ಮಾಡಿ ತರಗತಿ ಕೋಣೆಯಲ್ಲಿ ಕುಳಿತಿದ್ದ. ಈ ಬಗ್ಗೆ ಶಾಲೆಗೆ ಜಮೀನು ದಾನ ಮಾಡಿದ್ದ ಹಮಶಿದ್ಧ ಒಡೆಯರ ಎಂಬುವರು ಮಾಹಿತಿ ನೀಡಿದ್ದರು.
ಬಳಿಕ ಸರ್ಕಾರಿ ವಾಹನದಲ್ಲಿ ಆತನನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು.
ಜಿಲ್ಲಾಸ್ಪತ್ರೆ ವೈದ್ಯರು ಶಿಕ್ಷಕ ನಾರಾಯಣಪುರ ಮದ್ಯಪಾನ ಮಾಡಿರುವ ಬಗ್ಗೆ ದೃಢೀಕರಿಸಿದ್ದರಿಂದ ಆತನನ್ನು ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ನಾಗೂರ ತಿಳಿಸಿದ್ದಾರೆ