ಶವದ ಬಾಯಿಗೆ ನೀರು: ಗ್ರಾಮಸ್ಥರಿಗೆ ಮಳೆ ಬರುವ ನಂಬಿಕೆಕಲಕೇರಿ ಗ್ರಾಮದಲ್ಲಿ ವಿಲಕ್ಷಣ ಆಚರಣೆ
ವಿಜಯಪುರ, ಜು.16: ಮಳೆಗಾಗಿ ಸಮಾಧಿ ಮೇಲೆ ಚಿಕ್ಕ ಗುಂಡಿ ಕೊರೆದು ಅದರ ಮೂಲಕ ಶವದ ಬಾಯಿಗೆ ನೀರುಣಿಸುವ ವಿಲಕ್ಷಣ ಆಚರಣೆಯೊಂದು ಜಿಲ್ಲೆಯ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಈ ಭಾಗದಲ್ಲಿ ಪ್ರತಿ ವರ್ಷ ಮಳೆಯ ಕೊರತೆಯಿಂದ ಜನರು ಸಮಸ್ಯೆ ಎದುರಿಸುವಂತಾಗುತ್ತದೆ. ಇಲ್ಲಿನ ಜನರು ಒಣ ಬೇಸಾಯ ಅವಲಂಬಿಸಿದ್ದಾರೆ.
ಈ ಸಂದರ್ಭದಲ್ಲಿ ಮಳೆಗಾಗಿ, ಗ್ರಾಮಸ್ಥರೆಲ್ಲರು ಒಟ್ಟಾಗಿ ಸಮಾಧಿಗಳ ಮೇಲೆ ಚಿಕ್ಕದಾಗಿ ಗುಂಡಿ ಅಗೆದು ಗುಂಡಿಯ ಮೂಲಕ ಶವಗಳ ಬಾಯಿಗೆ ನೀರನ್ನು ಬಿಡುತ್ತಾರೆ. ಹೀಗೆ ಮಾಡಿದರೆ ಮಳೆಯಾಗುತ್ತದೆ ಎಂಬುವುದು ಗ್ರಾಮಸ್ಥರ ಬಲವಾದ ನಂಬಿಕೆಯಾಗಿದೆ.
ಈ ವಿಲಕ್ಷಣ ಪದ್ಧತಿ ಆಚರಣೆ ಹಿಂದೆ ಒಂದು ಕಾರಣವಿದೆ.
ಹಲವಾರು ವರ್ಷಗಳ ಹಿಂದೆ, ಗ್ರಾಮದಲ್ಲಿ ಒಬ್ಬ ವೃದ್ಧ ಬಾಯಿ ತೆರೆದುಕೊಂಡು ಮೃತಪಟ್ಟಿದ್ದನಂತೆ.
ಆತನ ಬಾಯಿ ಮುಚ್ಚದೆ ಸಮಾಧಿ ಮಾಡಲಾಯಿತು.
ಆ ವರ್ಷ, ಗ್ರಾಮದಲ್ಲಿ ಭೀಕರ ಬರ ಮತ್ತು ಕ್ಷಾಮ ತಲೆದೋರಿತಂತೆ. ಆಗ ಜನರು ತೊಂದರೆಗೀಡಾದರಂತೆ.
ನಂತರ ಗ್ರಾಮದ ಹಿರಿಯರು ಜ್ಯೋತಿಷಿಯನ್ನು ಕಂಡು ವಿಚಾರಿಸಿದ್ದಾರೆ. ಆಗ ಜ್ಯೋತಿಷಿ ಬಾಯಿ ತೆರೆದ ಶವ ಹೂತಿರುವುದೇ ಗ್ರಾಮದಲ್ಲಿ ಮಳೆಯ ನಷ್ಟಕ್ಕೆ ಕಾರಣವಾಗಿದೆ. ಶವದ ಬಾಯಿಗೆ ನೀರುಣಿಸಬೇಕು. ಆಗ ಮಳೆಯಾಗುತ್ತದೆ ಎಂದಿದ್ದರಂತೆ. ಆಗ ಗ್ರಾಮಸ್ಥರು ಜ್ಯೋತಿಷಿಯ ಸೂಚನೆಯಂತೆ ವೃದ್ಧನ ಶವದ ಸಮಾಧಿಗೆ ಚಿಕ್ಕ ಗುಂಡಿ ತೋಡಿ ನೀರು ತುಂಬಿಸಿದರಂತೆ. ನಂತರ ಆಶ್ಚರ್ಯ ಎಂಬಂತೆ ಮಳೆ ಬಂದಿಂತು ಎಂಬ ಪ್ರತೀತಿ ಇದೆ.
ಅಂದಿನಿಂದ, ಮಳೆಯ ಕೊರತೆ ಇದ್ದಾಗ, ಕಲಕೇರಿಯ ಗ್ರಾಮಸ್ಥರು ಈ ಆಚರಣೆಯನ್ನು ಮಾಡುತ್ತ ಬಂದಿದ್ದಾರೆ.
ಇನ್ನು ರಾಜ್ಯದ ಬಹುತೇಕ ಭಾಗಗಳಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಆದರೆ ಕಲಕೇರಿ ಗ್ರಾಮದಲ್ಲಿ ಒಂದು ಹನಿ ಕೂಡ ಮಳೆಯಾಗದಕ್ಕೆ ಈ ಭಾಗದ ರೈತರು, ಗ್ರಾಮಸ್ಥರು ಕಳೆದ ತಿಂಗಳಲ್ಲಿ ಮೃತಪಟ್ಟವರ ಪಟ್ಟಿ ಮಾಡಿ ಸ್ಮಶಾನಕ್ಕೆ ಹೋಗಿ, ಶವಗಳನ್ನು ಹೂತ್ತಿದ್ದ ತಲೆಯ ಭಾಗದ ಕಡೆ ಸುಮಾರು ಎರಡು ಅಡಿ ಆಳದ ಗುಂಡಿ ತೋಡಿ, ನೀರಿನ ಪೈಪ್ ಅಳವಡಿಸಿ ಟ್ಯಾಂಕರ್‍ನಿಂದ ನೀರನ್ನು ಸಮಾಧಿಗೆ ಬಿಡುವ ಮೂಲಕ ಮಳೆಗಾಗಿ ಪ್ರಾರ್ಥಿಸುತ್ತಾರೆ. ನಿನ್ನೆಯಷ್ಟೆ ಮತ್ತೆ ಶವದ ಬಾಯಿಗೆ ನೀರು ಬಿಟ್ಟಿದ್ದಾರೆ. ಈಗ ಮಳೆರಾಯನ ಕೃಪೆಗೆ ಗ್ರಾಮಸ್ಥರು ಕಾದು ನೋಡುತ್ತಿದ್ದಾರೆ.