ಕನ್ನಡ ಉಳಿವು,ಆಡಳಿತಗಾರರ ಮೇಲೆ ಬಹು ದೊಡ್ಡ ಜವಾಬ್ದಾರಿ:ಡಾ.ಪುರುಷೋತ್ತಮ ಬಿಳಿಮಲೆ
ಕಲಬುರಗಿ,ಜು.16: ಮಾತೃ ಭಾಷೆ ಕನ್ನಡ ಉಳಿಸಿ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಇಂದು ಆಡಳಿತ ನಡೆಸುತ್ತಿರುವ ಅಧಿಕಾರಿ-ಸಿಬ್ಬಂದಿಗಳ ಮೇಲಿದ್ದು, ಸರ್ಕಾರಿ ಆದೇಶವೆಂದು ಕನ್ನಡ ಬಳಸದೆ ಅದು ನಮ್ಮ ಭಾಷೆ ಎಂದು ಅನುಷ್ಠಾನಕ್ಕೆ ತರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುರುಷೋತ್ತಮ ಬಿಳಿಮಲೆ ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಪಂಪನ ಭಾಷೆ ನಮ್ಮದಾಗಿದೆ. ಕುಮಾರವ್ಯಾಸ, ಕುವೆಂಪು, ದ.ರಾ.ಬೇಂದ್ರೆ ಹಿಡಿದು ಡಾ.ಸಿದ್ದಲಿಂಗಯ್ಯ ಹೀಗೆ ಕನ್ನಡ ಬೆಳೆಸಿದವರ ಪಟ್ಟಿ ಬಹುದೊಡ್ಡದಿದೆ. ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದರು.
ಸರ್ಕಾರಿ ಸೌಲಭ್ಯ ಪಡೆಯಲು ಜನರು ಸರ್ಕಾರಿ ಕಚೇರಿಗೆ ಬರುತ್ತಾರೆ. ಅವರೊಂದಿಗೆ ಕನ್ನಡದಲ್ಲಿಯೆ ಮಾತನಾಡಿ ವ್ಯವಹರಿಸಬೇಕು. ಕಚೇರಿಯಲ್ಲಿ ಶೇ.100ರಷ್ಟು ಕನ್ನಡ ಅನುಷ್ಠಾನಕ್ಕೆ ತರಬೇಕು. ಕಚೇರಿ ನಾಮಫಲಕ ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು. ಪ್ರತಿ ಪತ್ರ ವ್ಯವಹಾರ ಕನ್ನಡದಲ್ಲಿರಬೇಕು.
ಆಡಳಿತದಲ್ಲಿ ಕನ್ನಡ ಬಳಕೆಗೆ ಏನೇ ಸಮಸ್ಯೆಗಳಿದ್ದರು ಹೇಳಿ, ಅದನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸೋಣ. ಉದ್ದೇಶಪೂರ್ವಕವಾಗಿ ಕನ್ನಡ ಬಳಕೆಗೆ ಹಿಂದೇಟು ಹಾಕಿದಲ್ಲಿ ಅಂತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಪ್ರಾಧಿಕಾರ ವರದಿ ಸಲ್ಲಿಸಲಿದೆ ಎಂದರು.
ದೇವರಿಗೆ ಕನ್ನಡ ಹೇಳಿಕೊಟ್ಟ, ವಚನ ಸಾಹಿತ್ಯದ ಕರ್ಮ ಭೂಮಿ ನೆಲ ಕಲ್ಯಾಣ ಕರ್ನಾಟಕ ಎಂಬುದು ಚರಿತ್ರಾರ್ಹ. ಬಸವಾದಿ ಶರಣರ ದೊಡ್ಡ ಕೊಡುಗೆ ಕನ್ನಡ ಭಾಷೆಕ್ಕಿದೆ. ಇಂತಹ ನಾಡು ನುಡಿ ಭಾಷೆಯನ್ನು ಬೆಳೆಸಲು ಎಲ್ಲರು ಕೈಜೋಡಿಸಬೇಕು ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
1971 ರಿಂದ ಅವಲೋಕಿಸಿದಾಗ ಹಿಂದಿ ಭಾಷೆ ಇದೂವರೆಗೆ ಶೇ.60ರಷ್ಟು ಬೆಳೆದಿದೆ. ಕನ್ನಡ ಭಾಷೆ ಬಳಕೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಅಧ್ಯಕ್ಷರು, ಇದು ಹೀಗೆ ಮುಂದುವರೆದರೆ ಮುಂದಿನ 3-4 ದಶಕಗಳಲ್ಲಿ ಕನ್ನಡ ಭಾಷೆ ಎಲ್ಲಿದೆಅಂತ ಹುಡುಕಬೇಕಾಗುತ್ತದೆ ಎಂದ ಅವರು, ಸಂವಿಧಾನದ ಶೆಡ್ಯೂಲ್-8 ಪ್ರಕಾರ ಕನ್ನಡ ಸೇರಿ 22 ಭಾಷೆ ಬಳಕೆಗೆ ಅವಕಾಶವಿದೆ. ಭಾಷಾ ದ್ವೇಷಿ ನಾನಲ್ಲ. ಎಲ್ಲ ಭಾಷೆ ಪ್ರೀತಿಸಿ, ಆದರೆ ಕನ್ನಡ ನಿಮ್ಮ ಮೊದಲ ಆಯ್ಕೆಯಾಗಿರಲಿ ಎಂದರು.
ಮದರಸಾದಲ್ಲಿ ಕನ್ನಡ ಬೋಧನೆ:
ಮದರಸಾದಲ್ಲಿಯೂ ಪ್ರತಿ ವಾರ ಎರಡು ಗಂಟೆ ಕನ್ನಡ ಬೋಧನೆ ಮಾಡಲಾಗುತ್ತಿದೆ. ಇದಲ್ಲದೆ ಕೈಗಾರಿಕೆ ಕೇಂದ್ರಗಳಲ್ಲಿ 20 ಜನರು ಕನ್ನಡ ಕಲಿಯಲು ಆಸಕ್ತಿ ತೋರಿದಲ್ಲಿ, ಪ್ರಾಧಿಕಾರವೇ ವಾರದಲ್ಲಿ 3 ದಿನಗಳಂತೆ ಮೂರು ತಿಂಗಳ ಕಾಲ 36 ಗಂಟೆ ಪಾಠ ಮಾಡಲು ಶಿಕ್ಷಕರನ್ನು ಕಳುಹಿಸಲಾಗುವುದು ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಸಹಾಯಕ ಅಯುಕ್ತೆ ರೂಪಿಂದರ್ ಸಿಂಗ್ ಕೌರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ್, ಕಲಬುರಗಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ರೆಹಮಾನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಅವರು ಸರ್ವರನ್ನು ಸಭೆಗೆ ಸ್ವಾಗತಿಸುತ್ತಾ ಡಾ.ಪುರುಷೋತ್ತಮ ಬಿಳಿಮಲೆ ಅವರ ವ್ಯಕ್ತಿ ಪರಿಚಯ ಮಾಡಿಕೊಟ್ಟರು.