ಕೋಟೆ ನಗರಿಯಲ್ಲಿಹಿಂದೂ ಮಹಾಗಣಪತಿ ಶೋಭಾಯಾತ್ರೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಸೆ.೨೮: ದೇಶ ಸೇರಿದಂತೆ ಇಡೀ ಏಷ್ಯಾ ಖಂಡದಲ್ಲೇ ಗಮನಸೆಳೆದಿರುವ ಕೋಟೆನಾಡು ಚಿತ್ರದುರ್ಗದ ಹಿಂದೂ ಮಹಾಗಣಪತಿ ಮಹೋತ್ಸವದ ಶೋಭಾಯಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ನಡೆಯಿತು.ಶೋಭಾಯಾತ್ರೆ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದಲೇ ನಗರದ ಚಳ್ಳಕೆರೆ ರಸ್ತೆಯಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೂ ವಿವಿಧ ವರ್ಣಗಳಲ್ಲಿ ಝಗ ಮಗಿಸುತ್ತಿರುವ ವೈವಿಧ್ಯಮಯ ವಿದ್ಯುತ್ ದೀಪಗಳು ಹಾಗೂ ಸಂಪೂರ್ಣ ಕೇಸರಿಯನ್ನೇ ಕೋಟೆನಗರಿ ಹೊದ್ದುಕೊಂಡು, ಭಕ್ತರನ್ನು ಕೈ ಬೀಸಿ ಕರೆದಿದ್ದು ಸುಮಾರು ೨.೫ ಲಕ್ಷ ಕ್ಕೂ ಹೆಚ್ಚು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಹಿಂದೂ ಮಹಾಗಣಪನಿಗೆ ತಮ್ಮ ಭಕ್ತಿ ಸಮರ್ಪಿಸಿದರು.
ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಓಂ ಶ್ರೀ ಆಂಜನೇಯ ಸ್ವಾಮಿ ಭಾವಚಿತ್ರದ ಬೃಹತ್ ಧ್ವಜಗಳು ಮತ್ತು ಗಾಂಧಿ ವೃತ್ತದಲ್ಲಿ ಸುಮಾರು ೨೦ ಅಡಿ ಮೇಲ್ಬಾಗದಲ್ಲಿ ಪ್ರತಿಷ್ಠಾಪಿಸಿರುವ ಶ್ರೀರಾಮನ ಮೂರ್ತಿ ಜನರ ಗಮನ ಸೆಳೆಯುತ್ತಿತ್ತು.ಅಪಾರ ಪ್ರಮಾಣದ ಜನಸಾಗರದ ಮಧ್ಯೆ ಸಾಗಿದ ಮಹಾಗಣಪನ ಶೋಪಭಾಯಾತ್ರೆಯನ್ನು ಅಸಂಖ್ಯಾತ ಭಕ್ತರು ರಸ್ತೆಯ ಅಕ್ಕಪಕ್ಕದಲ್ಲಿ ಕಾತರದಿಂದ ಕಾದುನಿಂತು ಕಣ್ತುಂಬಿಕೊಂಡರು ಶೋಭಾಯಾತ್ರೆಯಲ್ಲಿ ಭಾಗವಹಿಸಲು ರಾಜ್ಯದ ಮೂಲೆ-ಮೂಲೆಗಳಿಂದ ಜನರು ಚಿತ್ರದುರ್ಗಕ್ಕೆ ಆಗಮಿಸಿದ್ದರು.
ಬಿಡಿ ರಸ್ತೆಯ ಜೈನಧಾಮ ಬಳಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಗೆ ಇಂದು ಬೇಳಗ್ಗೆ ೧೧.೩೦ ರ ಸುಮಾರಿನಲ್ಲಿ ಬಜರಂಗದಳ ರಾಷ್ಟ್ರೀಯ ಸಂಯೋಜಕ ನೀರಜ್ ದೊನೇರಿಯಾ ಮಹಾಮಂಗಳಾರತಿ ಪೂಜೆ ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.ಶೋಭಾಯಾತ್ರೆಯಲ್ಲಿ ನಾಡಿನ ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರುಗು ಹೆಚ್ಚಿಸಿದವು. ಇನ್ನೂ ೩ ಡಿಜೆಗಳ ಶಬ್ದಕ್ಕೆ ಯುವಕರು ಹಾಗೂ ಯುವತಿಯರು ಕುಣಿದು ಕುಪ್ಪಳಿಸಿದರು.
ಶೋಭಾಯಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಜನರ ಹಸಿವನ್ನು ನೀಗಿಸುವ ಸಲುವಾಗಿ ಶೋಭಾಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ವಿವಿಧ ಸಂಘಟನೆಗಳು ಪಲಾವ್, ಪುಳಿಯೋಗರೆ, ಚಿತ್ರಾನ್ನ, ಮೊಸರು ಅನ್ನ, ನೀರು, ಐಸ್ ಕ್ರೀಂ, ಮಜ್ಜಿಗೆ ಹಾಗೂ ಸಿಹಿ ತಿನಿಸುಗಳನ್ನು ವಿತರಿಸಿದರು. ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರಿಗೆ ರಕ್ಷಣೆ ಹಾಗೂ ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು ೩೫೦೦ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.