ಗ್ರಾಮಲೆಕ್ಕಿಗರ ಪ್ರತಿಭಟನೆ
ಚನ್ನಮ್ಮನ ಕಿತ್ತೂರು,ಸೆ28: ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ನಿರಂತರ ಅನ್ಯಾಯ ಸರಿಪಡಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲೂಕಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದಿಂದ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ರವೀಂದ್ರ ಜಾಧವ ಮಾತನಾಡಿ, ಈಗಾಗಲೇ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘವು ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕುಂದು ಕೊರತೆ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತಂದು ಸರಿಪಡಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಲ್ಲಿ ಕೋರಲಾಗಿತ್ತು. ನಂತರ ಈ ಬಗ್ಗೆ ಎರಡು ಬಾರಿ ಸಭೆ ಕರೆದು ಚರ್ಚೆ ಮಾಡಿ ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಿದ್ದರು. ಆದರೂ ಇಲ್ಲಿವರೆಗೆ ಭರವಸೆಗಳು ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ಯ ಇಲಾಖೆಯ ಕೆಲಸದ ಒತ್ತಡ ನಮ್ಮ ಇಲಾಖೆ ನೌಕರರ ಮೇಲೆ ಹೇರಬಾರದು. ರಜಾ ದಿನದಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಬೇಕು. ಸಾರ್ವತ್ರಿಕ ರಜಾ ದಿನಗಳಲ್ಲೂ ಕೆಲಸ ಮಾಡುವಂತೆ ಒತ್ತಡ ಹೇರುತ್ತಿರುವುದರಿಂದ ಕೌಟುಂಬಿಕ ಕಲಹಗಳು ಉಂಟಾಗುತ್ತಿವೆ. ಇದರಿಂದ ಇಲಾಖಾ ಕೆಲಸ ಕಾರ್ಯ ಮಾಡಲು ಕಷ್ಟ ವಾಗುತ್ತಿದೆ.
ಗ್ರಾಮ ಲೆಕ್ಕಾಧಿಕಾರಿಗಳ ಪ್ರಯಾಣ ಭತ್ಯೆ ದರವನ್ನು 1,000 ರೂ.ಗೆ ಹೆಚ್ಚಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ತೀರ್ಮಾನಿಸಿದ್ದರು. ಅಲ್ಲದೆ, ರಾಜ್ಯ ಸಂಘವು ಪ್ರಯಾಣ ಭತ್ಯೆ ಹೆಚ್ಚಿಸಲು 6ನೇ ವೇತನ ಆಯೋಗಕ್ಕೂ ಮನವಿ ಸಲ್ಲಿಸಿತ್ತು. ಆದರೂ ಸರಕಾರ ಕೇವಲ 300 ರೂ. ನಿಂದ 500 ರೂ. ಮಾತ್ರ ಹೆಚ್ಚಿಸಿದೆ. ಹಾಗಾಗಿ ಅದನ್ನು ಪುನರ್ ಪರಿಶೀಲಿಸಿ 1,000 ರೂ.ಗೆ ಹೆಚ್ಚಿಸುವ ಬಗ್ಗೆ ಕ್ರಮವಹಿಸಬೇಕು ಇದರ ಜೊತೆಗೆ ನಮ್ಮೇಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇದಲ್ಲದೇ ಸರಕಾರ ಮೊಬೈಲ್ ಕೊಡದೇ ಸತಾಯಿಸುತ್ತಿದ್ದು ನಮ್ಮ ಸ್ವಂತ ಮೊಬೈಲ್‍ನಿಂದ ಸರಕಾರದ ಕೆಲಸ ಮಾಡಲು ಒತ್ತಡ ಹಾಕುತ್ತಿದ್ದಾರೆ. ಇದಾಗಬಾರದು ಎಂದು ಸರಕಾರÀವನ್ನು ಒತ್ತಾಯಿಸಿದರು. ನಂತರ ತಹಶೀಲ್ದಾರ ರವೀಂದ್ರ ಹಾದಿಮನಿಯವರ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು ನಿಮ್ಮ ಬೇಡಿಕೆ ಮನವಿಯನ್ನು ಸಚಿವರಿಗೆ ಹಾಗೂ ಸರಕಾರ, ಸಂಬಂಧಪಟ್ಟ ಇಲಾಖೆಯವರಿಗೆ ತಲುಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನೌಕರ ಸಂಘದ ಅಧ್ಯಕ್ಷ ವಿ.ಎಸ್. ಬರಗಾಲೆ, ಎಸ್.ಎಸ್.ಹುಲಮನಿ, ಕುಬೇರ ಜಾಯಕ್ಕನವರ, ಗಡಾದ, ಪ್ರೌಢಶಾಲಾ ಸಂಘದ ಅಧ್ಯಕ್ಷ ಗಜಾನನ ಸೊಗಲನ್ನವರ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಮಹೇಶ ಚನ್ನಂಗಿ, ಮತ್ತು ರೈತ ಸಂಘಟನೆಗಳು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದವು.
ಗ್ರೇಡ್-2 ತಹಶೀಲ್ದಾರ ರವೀಂದ್ರ ನೇಸರಗಿ, ಉಪ ತಹಶೀಲ್ದಾರ ಪಿ.ವ್ಹಿ. ದಂದೂರ, ಶೀರಸ್ಥೆದಾರ ಪ್ರಕಾಶ ಕೋರಿ, ಸಂಘದ ಉಪಾಧ್ಯಕ್ಷ ಗುರುನಾಥ ಬಂಡಿವಡ್ಡರ, ಕಾರ್ಯದರ್ಶಿ ಎಂ.ಎಂ.ಮಕಾನದಾರ, ಖಜಾಂಚಿ ಶ್ರೀದೇವಿ ಗಾಣಿಗೇರ, ಪ್ರಭಾರಿ ಕಂದಾಯ ನಿರೀಕ್ಷಕ ಎಂ.ಎಂ.ನೀರಲಗಿ, ಗ್ರಾಮಲೆಕ್ಕಿಗರಾದ ಸುರೇಶ ಸಿದ್ದುನ್ನವರ, ಎಂ.ಡಿ.ಹಿರೇಮಠ, ಎ.ಎಸ್. ಅರಸಿನಕರ, ಎಸ್.ಎಸ್. ಶೀಲೈನವರಮಠ, ಬಾಬಣ್ಣಾ ತಳವಾರ, ಈರಣ್ಣಾ ಕರಡಿ, ಲಾಲಸಾಬ ಮಕಾನದಾರ, ಎಂ.ಎ.ಜಕಾತಿ, ಮಂಜುನಾಥ ಕಡಕೋಳ, ಬಿ.ಎಫ್.ಕೊಂಡಿಕೊಪ್ಪ, ಪಟ್ಟಣಶೆಟ್ಟಿ, ಸಲೀಂ ಖುದ್ದುನ್ನವರ, ಮಹಾಂತೇಶ ತಡಕೋಡ, ಲೋಕೇಶ ಉಳ್ಳಿಗೇರಿ, ಅಶೋಕ ಪಟಕಳ್ಳ, ಗ್ರಾಮ ಸಹಾಯಕರು ಕಲ್ಲಪ್ಪ, ಬಸವರಾಜ, ಈರಣ್ಣಾ ಕುಂಟಿರಪ್ಪಗೋಳ ಸೇರಿದಂತೆ ಸರ್ವ ಕಛೇರಿ ಸಿಬ್ಬಂದಿ, ಸಾರ್ವಜನಿಕರಿದ್ದರು.