ಬಿಜೆಪಿ ನಡೆ ವಿರುದ್ಧ ಪಂಜಿನ ಮೆರವಣಿಗೆ ಆಕ್ರೋಶ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.28:- ಬಿಜೆಪಿ ಪಕ್ಷವು ವ್ಯರ್ಥ ಸುಳ್ಳು ಆರೋಪದ ಮುಡಾ ಹಗರಣ ಮುಂದಿಟ್ಟು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವುದನ್ನು ವಿರೋಧಿಸಿ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ನಗರದ ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ಪಂಜು ಹಿಡಿದು ಬಿಜೆಪಿ ವಿರುದ್ಧ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಆಶ್ಲೀಲ ಸಿಡಿ ಪ್ರಕರಣವಿಲ್ಲ. ಭೂಮಿಯನ್ನು ಹಣ ಕೊಟ್ಟು ಪಡೆದಿರುವ ಆರೋಪವಷ್ಟೇ ಬಂದಿದೆ. ಅದರಲ್ಲೂ ಬಿಜೆಪಿ ಅವಧಿಯಲ್ಲಿ ನಿವೇಶನ ಪಡೆದಿದ್ದು, ಪ್ರಕರಣದ ವಿಚಾರವಾಗಿ ಕಾನೂನು ಹೋರಾಟ ಸಹ ನಡೆಯುತ್ತಿದೆ. ಹೀಗಿರುವಾಗ ವಿರೋಧ ಪಕ್ಷದ ಬಿಜೆಪಿ ನಾಯಕರು ಮಾಡಲು ಕೆಲಸವಿಲ್ಲದೆ ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿಯ ಒಬ್ಬೊಬ್ಬ ನಾಯಕರ ವಿರುದ್ಧ ಎಷ್ಟೆಷ್ಟು ಪ್ರಕರಣಗಳಿವೆ ಎಂಬುದನ್ನು ಮುಂದೆ ಬಿಚ್ಚಿಡುತ್ತೇವೆ. ಇದೇ ಮುಡಾದಲ್ಲಿ ಬಿಜೆಪಿ ಅವಧಿಯಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆಯೂ ದಾಖಲೆ ಬಿಡುಗಡೆ ಮಾಡುತ್ತೇವೆ. ಹೀಗಿರುವಾಗ ಕೇವಲ ಆರೋಪ ಹೊರಿಸಿದ ಮಾತ್ರಕ್ಕೆ ಸಿಎಂ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು.
ಇನ್ನೂ ಬಿಜೆಪಿ ಕಾರ್ಯಕರ್ತರು ಲೋಕಾಯುಕ್ತ ಕಚೇರಿಗೆ ತೆರಳಿ ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ. ಇದನ್ನೂ ಸಹಿಸಲ್ಲ ಲೋಕಾಯುಕ್ತರ ಮೇಲೆ ಒತ್ತಡ ಹೇರುತ್ತಿರುವುದನ್ನು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ನಾವು ಸಹ ಇದರ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದರು.
ಸಿಎಂ ವಿರುದ್ಧ ಬಿಜೆಪಿ ಬೀದಿಗಿಳಿದರೆ ನಾವು ಉಗ್ರ ರೂಪದ ಹೋರಾಟದ ಮೂಲಕ ತಿರುಗೇಟು ನೀಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶೇಖರ್, ಕೃಷ್ಣನಾಯಕ, ಮಹದೇವ, ಶಿವು, ಗಿರೀಶ್, ಕುಮಾರ, ಮಲ್ಲುಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.