ಹೂಗಾರ ಸಮಾಜದ ನಿಗಮಕ್ಕೆ 100 ಕೋಟಿ ರೂ. ಮೀಸಲಿಡಲು ಆಗ್ರಹ
ಅಫಜಲಪುರ:ಜು.16: ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಹೂಗಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಈ ಕೂಡಲೇ 100 ಕೋಟಿ ರೂ. ಮೀಸಲಿರಿಸಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಸರ್ಕಾರಕ್ಕೆ ಆಗ್ರಹಿಸಿದರು.
ಸೋಮವಾರ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ರಾಯಚೂರು ಅವರು ಕರೆ ನೀಡಿದ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಏಕಕಾಲಕ್ಕೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಅಭಿಯಾನ ಹಮ್ಮಿಕೊಂಡ ಹಿನ್ನೆಲೆ ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕಾ ಹೂಗಾರ ಸಮಾಜದ ಗೌರವಾಧ್ಯಕ್ಷ ರೇವಣಸಿದ್ಧ ಹೂಗಾರ ಹಾಗೂ ತಾಲೂಕಾಧ್ಯಕ್ಷ ಮಡಿವಾಳ ಹೂಗಾರ ಅತನೂರ ಇವರ ನೇತೃತ್ವದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಹೂಗಾರ ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ ನಮ್ಮ ಸಮಾಜ ಹೋರಾಟ ಮಾಡುತ್ತಾ ಬಂದಿದೆ. ಆದರೆ ಯಾವುದೇ ಸರ್ಕಾರ ನಮ್ಮ ಕೂಗನ್ನು ಕೇಳಲಿಲ್ಲ. ಹೀಗಾಗಿ 2022 ರ ಜುಲೈ 15ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಸೇರಿ ನಮ್ಮ ಹಕ್ಕೊತ್ತಾಯ ಮಾಡಿದಾಗ 2023ರ ಫೆಬ್ರವರಿ 21ರಂದು ಅಧೀಕೃತವಾಗಿ ಕರ್ನಾಟಕ ಮಾಲಿ, ಮಾಲಗಾರ ಹಾಗೂ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ಯಾವುದೇ ಅನುದಾನ ಮೀಸಲಿಟ್ಟಿರುವುದಿಲ್ಲ. ಹೀಗಾಗಿ
ಇಂದಿನಿಂದ ರಾಜ್ಯ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭಗೊಂಡಿದ್ದು ಜುಲೈ 26ರ ವರೆಗೆ ವಿಧಾನಸಭಾ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಕೂಡಲೇ 100 ಕೋಟಿ ರೂಪಾಯಿ ಮೀಸಲಿರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಅಥವಾ ಫ್ರೀಡಂ ಪಾರ್ಕಿನಲ್ಲಿ ಸಹಸ್ರಾರು ಜನ ಸೇರಿ ಹೋರಾಟ ರೂಪಿಸುವ ಅನಿವಾರ್ಯತೆ ಇದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಪ್ರತಿಭಟನೆ ಉದ್ದೇಶಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಾರಾಮ ಅವಟೆ ಮಾತನಾಡಿ ಸರ್ಕಾರ ಸಣ್ಣ ಸಮುದಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ನಮಗೆ ಆಶ್ವಾಸನೆ ಮತ್ತು ಭರವಸೆಗಳನ್ನು ನೀಡುತ್ತಾರೆ ಹೊರತು ನಮ್ಮ ಬೇಡಿಕೆಯನ್ನು ಈಡೇರಿಸುವುದಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿ ಹೂಗಾರ ಸಮಾಜದ ಅಭಿವೃದ್ಧಿಗಾಗಿ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಸುರೇಶ ತೇಲಿ, ಖಜಾಂಚಿ ಮಂಜುನಾಥ ಹೂಗಾರ, ಮಹಾಂತೇಶ ಹೂಗಾರ, ಶ್ರೀಶೈಲ್ ಹೂಗಾರ, ಸಿದ್ದೇಶ್ವರ ಹೂಗಾರ, ಗುಂಡು ಹೂಗಾರ, ಗಿರಿಮಲ್ಲಪ್ಪ ಹೂಗಾರ, ಶಿವಲಿಂಗ ಹೂಗಾರ, ನಿಂಗಣ್ಣ ಹೂಗಾರ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಅನೇಕರಿದ್ದರು.