ಫಲಾನುಭವಿಗಳಿಗೆ ಸರಕಾರದ ಯೋಜನೆ ಮುಟ್ಟಿಸಲು ಅಧಿಕಾರಿಗಳಿಗೆ ಸಲಹೆ
ಬಸವಕಲ್ಯಾಣ: ಜು.16:ಸರಕಾರದ ಐದು ಮಹತ್ವಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮರ್ಪಕವಾಗಿ ಫಲಾನುಭವಿಗಳಿಗೆ ಮುಟ್ಟಿಸಲು ಸಂಬಂಧಿತ ಅಧಿಕಾರಿಗಳು ಪ್ರಯತ್ನಿಸಬೇಕು ಮತ್ತು ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷ ನೀಲಕಂಠ ರಾಠೋಡ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ನೀಲಕಂಠ ರಾಠೋಡ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ವಿಧಾನ ಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಮತದಾರರಿಗೆ ನೀಡಿದ ಭರವಸೆಯನ್ನು ಅಧಿಕಾರಕ್ಕೆ ಬಂದ ನಂತರ ಸರಕಾರ ಜಾರಿಗೊಳಿಸಿದೆ. ಹೀಗಾಗಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಮುಟ್ಟಿಸಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಶಕ್ತಿ ಯೋಜನೆಯಡಿ ನಿತ್ಯ ಬಸವಕಲ್ಯಾಣ ತಾಲೂಕಿನಲ್ಲಿ 19 ಸಾವಿರ ಮಹಿಳೆಯರು ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಬಸ್ ಘಟಕದ ವ್ಯವಸ್ಥಾಪಕ ಮೊಹಮ್ಮದ್ ನಯೀಮ್ ತಿಳಿಸಿದರು. ಬಸವಕಲ್ಯಾಣದ ಬಸ್ ಘಟಕದಲ್ಲಿ ನಿತ್ಯ ಒಟ್ಟು ಎಷ್ಟು ಬಸ್‍ಗಳು ಸಂಚರಿಸುತ್ತಿವೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಫಿ ಹಾಗೂ ತಾಪಂ ಯೋಜನಾಧಿಕಾರಿ ರಾಜಶೇಖರ ನೆಲ್ಲಿ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಅಧಿಕಾರಿ 111 ಬಸ್‍ಗಳಿದ್ದು 105 ಬಸ್‍ಗಳು ಪ್ರಯಾಣಿಕರ ಅನುಕೂಲಕ್ಕಾಗಿ ಸಂಚರಿಸುತ್ತಿವೆ ಎಂದರು.
ಸಮಯಕ್ಕೆ ಸರಿಯಾಗಿ ಬಸ್‍ಗಳ ಓಡಾಟ ಇಲ್ಲ, ಒಂದೇ ರೂಟ್‍ಗಳಲ್ಲಿ ಒಂದರ ಹಿಂದೆ ಒಂದು ಬಸ್ ಸಂಚಾರ ಮಾಡಲಾಗುತ್ತಿದೆ. ಮಹಿಳೆಯರು ಕೈ ಮಾಡಿದರೂ ಬಸ್‍ಗಳು ನಿಲ್ಲಿಸುತ್ತಿಲ್ಲ ಹೀಗಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ಇದೆ ಎಂದು ತಾಪಂ ಇಓ ರಮೇಶ ಸುಲ್ಫಿ ಪ್ರಶ್ನಿಸಿದರು. ಇಲಾಖೆಯಲ್ಲಿ ಚಾಲಕರ-ನಿರ್ವಾಹಕರ ಹುದ್ದೆಗಳು ಖಾಲಿಯಿಂದಾಗಿ ಈ ಸಮಸ್ಯೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲಾಗುವದು ಎಂದು ಅಧಿಕಾರಿ ಉತ್ತರಿಸಿದರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆಯಾಗುತ್ತಿದೆ. ಶಾಲಾ ಅವಧಿ ಮುಗಿದ ನಂತರ ತಮ್ಮ ಗ್ರಾಮಗಳಿಗೆ ತೆರಳಲು ಗಂಟೇಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಗಿದೆ. ಅಲ್ಲಿನ ಕಂಟ್ರೋಲರ್ ಅವರಿಗೆ ಮಾಹಿತಿ ಕೇಳಿದರೆ ಹಾರಿಕೆಯ ಉತ್ತರ ನೀಡಲಾಗುತ್ತಿದೆ ಎಂದು ಸದಸ್ಯರಾದ ಎಂ.ಡಿ ಖುತುಬೋದ್ದಿನ್ ಹಾಗೂ ಜಗನ್ನಾಥ ಪಾಟೀಲ ಅವರು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಲಾಗುವದು ಎಂದು ಅಧಿಕಾರಿ ಉತ್ತರಿಸಿದ ನಂತರ ಚರ್ಚೆಗೆ ವಿರಾಮ ನೀಡಲಾಯಿತು.
ಗೃಹಲಕ್ಷ್ಮೀ ಯೋಜನೆಯಡಿ ಬಸವಕಲ್ಯಾಣ ತಾಲೂಕಿನಲ್ಲಿ 55910 ಅರ್ಜಿಗಳು ಬಂದಿವೆ. ಇದರಲ್ಲಿ 4482 ಬಾಕಿ ಅರ್ಜಿಗಳು ಉಳಿದಿವೆ. ಅಲ್ಲದೆ ಹುಲಸೂರ ತಾಲೂಕಿನಲ್ಲಿ 9304 ಅರ್ಜಿಗಳು ಬಂದಿದ್ದು 706 ಬಾಕಿ ಅರ್ಜಿಗಳು ಉಳಿದಿವೆ. ತಾಂತ್ರಿಕ ದೋಷದ ಕಾರಣದಿಂದ ಬಾಕಿ ಉಳಿದ ಅರ್ಜಿಗಳ ಕೆಲ ದಿನಗಳಲ್ಲಿ ಇಲಾಖೆಯಿಂದ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸಿಡಿಪಿಓ ಗೌತಮ ಸಿಂಧೆ ಸಭೆಯ ಗಮನಕ್ಕೆ ತಂದರು. ಮುಂದಿನ ಸಭೆಯ ಒಳಗಾಗಿ ಬಾಕಿ ಉಳಿದ ಅರ್ಜಿಗಳ ಇತ್ಯರ್ಥಗೊಳಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಸರಕಾರದ ಯೋಜನೆ ಮುಟ್ಟಿಸಲು ಇಲಾಖೆ ಮುಂದಾಗಬೇಕು ಎಂದು ಅಧ್ಯಕ್ಷ ನೀಲಕಂಠ ರಾಠೋಡ ಅಧಿಕಾರಿಗೆ ಸಲಹೆ ನೀಡಿದರು.
ಗೃಹ ಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 110474 ಮೀಟರಗಳಿದ್ದು ಇದರಲ್ಲಿ 53480 ಮೀಟರ್‍ಗಳ ಬಳಕೆದಾರರು 200 ಯೂನಿಟ್‍ಗಿಂತ ಕಡಿಮೆ ವಿದ್ಯುತ್ ಬಳಸಿ ಗೃಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಬಳಕೆದಾರರು ಸರಕಾರದ ಗೃಹ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಜೆಸ್ಕಾಂನ ಎಇಇ ಗಣಪತಿ ಮೈನಾಳೆ ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ 139 ನ್ಯಾಯಬೆಲೆ ಅಂಗಡಿಗಳ ಮೂಲಕ 66352 ಕುಟುಂಬಗಳಿಗೆ ಸರಕಾರದ ಯೋಜನೆ ಲಭಿಸುತ್ತಿದೆ ಎಂದು ಇಲಾಖೆಯ ಶಿರಸ್ತೇದಾರ ನಿಂಗಯ್ಯ ಹಿರೇಮಠ ತಿಳಿಸಿದರು. ಈ ವೇಳೆ ಅಧ್ಯಕ್ಷ ನೀಲಕಂಠ ರಾಠೋಡ ಅವರು ಕೇಳಿದ ಕೆಲ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಸಮರ್ಪಕವಾದ ಉತ್ತರನೀಡದ ಕಾರಣ ಮುಂದಿನ ಸಭೆಯಲ್ಲಿ ಎಲ್ಲಾ ಅಗತ್ಯ ಮಾಹಿತಿಗಳನ್ನು ತರುವ ಮೂಲಕ ಸಭೆಗೆ ಮೇಲಾಧಿಕಾರಿಗಳು ಹಾಜರಾಗಬೇಕು ಎಂದು ತಿಳಿಸಲಾಯಿತು.
ಯುವನಿಧಿ ಯೋಜನೆಯಡಿ ಬಸವಕಲ್ಯಾಣ ತಾಲೂಕಿನಲ್ಲಿ 1303 ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗುತ್ತಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕಂಪ್ಯೂಟರ್ ಆಪರೇಟರ್ ಮಾಹಿತಿ ನೀಡಲು ಮುಂದಾದರು. ಇದಕ್ಕೆ ಪ್ರಶ್ನಿಸಿದ ಅಧ್ಯಕ್ಷ ನೀಲಕಂಠ ರಾಠೋಡ ಅವರು ನೀವು ಇಲಾಖೆಯ ಅಧಿಕಾರಿನಾ- ಸಿಬ್ಬಂದಿನಾ ಎಂದು ಪ್ರಶ್ನಿಸಿದರು. ಸಿಬ್ಬಂದಿ ಎಂದಾಗ ಹಾಗಾದರೆ ಅಧಿಕಾರಿ ಎಲ್ಲಿ ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳು ಸಭೆ ಕರೆದ ಹಿನ್ನಲೆಯಲ್ಲಿ ಹೋಗಿದ್ದಾರೆ ಎಂದು ಸಿಬ್ಬಂದಿ ಉತ್ತರಿಸಿದರು. ಇದಕ್ಕೆ ಮತ್ತೆ ಪ್ರಶ್ನಿಸಿದ ಅಧ್ಯಕ್ಷರು ಇಲಾಖೆಯ ಯೋಜನೆಗಳ ಕುರಿತು ನಿಮ್ಮಲ್ಲಿ ಸಂಪೂರ್ಣ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದರು. ಮುಂದಿನ ಸಭೆಗೆ ಸಂಪೂರ್ಣ ಮಾಹಿತಿ ತರುವ ಮೂಲಕ ಖುದ್ದಾಗಿ ಅಧಿಕಾರಿ ಬಸವರಾಜ ಅವರು ಭಾಗವಹಿಸಬೇಕು ಎಂದು ತಿಳಿಸಿದರು.
ಈ ವೇಳೆ ವೇದಿಕೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷ ನೀಲಕಂಠ ರಾಠೋಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಫಿ, ತಾಪಂ ಯೋಜನಾ ಅಧಿಕಾರಿ ರಾಜಶೇಖರ ನೆಲ್ಲಿ ಉಪಸ್ಥಿತರಿದ್ದರು.
ಮೊದಲ ಸಭೆಯಲ್ಲಿ ಭಾಗವಹಿಸಿದ ಸದಸ್ಯರಾದ ಎಂ.ಡಿ ಖುತುಬೋದ್ದಿನ್, ಜಗನ್ನಾಥ ಆರ್. ಪಾಟೀಲ, ದಶರಥ ಬಾಬಗೆ,ಅನೀಲ ಗೋಖಲೆ, ಸಂಜೀವಕುಮಾರ ದೆಗಲೂರೆ, ದೇವಿದಾಸ ಗರೂಡಕರ, ಯುವರಾಜ ಸೂರ್ಯವಂಶಿ, ಸೋನಾಬಾಯಿ ಶಿವರಾಜ, ಪ್ರೀತೇಶ ಮುಳೆ, ಮಹಾದೇವ ಕೋಟಮಪಳ್ಳಿ, ದಿನೇಶ ತ್ರಿಮುಖೆ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಕುರಿತು ಸಭೆಗೆ ಮಾಹಿತಿ ನೀಡಿದರು.