ದಯೆ ಮತ್ತು ಪ್ರೀತಿ ಭಗವಂತನ ಭಾಷೆ: ಹಾರಕೂಡ ಶ್ರೀ
ಬಸವಕಲ್ಯಾಣ: ಜು.16:ದಯೆ ಮತ್ತು ಪ್ರೀತಿ ಇವು ಭಗವಂತನ ಭಾಷೆಯಾಗಿದ್ದು ಆ ಭಾಷೆಯು ಅರ್ಥವಾಗಬೇಕಾದರೆ ನಾವು ಸಂಪೂರ್ಣ ಸೊನ್ನೆ ಭಾವದಿಂದ ಎಲ್ಲಿಲ್ಲದ ವ್ಯಾಕುಲ್ಯತೆಯಿಂದ ದೈವ ಸನ್ನಿಧಿಯನ್ನು ಪ್ರಾರ್ಥಿಸಬೇಕೆಂದು ಹಾರಕೂಡನ ಡಾ. ಚನ್ನವೀರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಂದ ಆಯೋಜಿಸಿದ ಗುರುವಂದನೆ ಹಾಗೂ 677ನೇ ತುಲಾಭಾರ ಸೇವೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಆಧ್ಯಾತ್ಮಿಕ ಛಲ, ದೈಹಿಕ – ಮಾನಸಿಕ ಬಲ ಮತ್ತು ದೈವಿಕ ಹಂಬಲವಿದ್ದರೆ ಗುರುದೇವನ ಕೃಪೆ ಜಲಪಾತದೋಪಾದಿಯಲ್ಲಿ ಹರಿದು ಬರುತ್ತದೆ ಎನ್ನುವಲ್ಲಿ ಯಾವ ಸಂಶಯವೂ ಇಲ್ಲ ಎಂದರು.
ಸಮಾಜದ, ರಾಷ್ಟ್ರದ ಫಲವತ್ತತೆ ವೃದ್ಧಿಸುವಲ್ಲಿ ಧರ್ಮಧ್ಯಾತ್ಮ ಗುರುಗಳು ಹಾಗೂ ವಿಧ್ಯಾಗುರುಗಳ ಪಾತ್ರ ಹಿರಿದಾಗಿದೆ. ಶಿಕ್ಷಣ ಮತ್ತು ಧರ್ಮ ಸಂಸ್ಕಾರ ಜೊತೆ ಜೊತೆಗೆ ಸಾಗಿದಾಗ ಬದುಕು ಚಲನಶೀಲಗೊಂಡು ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಬದ್ಧತೆಯ ದುಡಿಮೆಯಿಂದ ಕೃಷಿ ಮಾಡಿದರೆ ಯಶಸ್ಸಿನ ಫಸಲು ಪಡೆಯಲು ಸಾಧ್ಯವಾಗುತ್ತದೆ. ಸತತ ಮತ್ತು ಸರಿಯಾದ ಪರಿಶ್ರಮ ಪ್ರಯತ್ನವಿದ್ದಲ್ಲಿ ಪರಮಾತ್ಮವಿರುತ್ತಾನೆ ಎಂದು ತಿಳಿಸಿದರು.
ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಸಿಬ್ಬಂದಿ ವರ್ಗದವರ ಶ್ರದ್ಧೆ, ಭಕ್ತಿಯಿಂದ ಕೂಡಿರುವ ಪ್ರಾಮಾಣಿಕ ಸೇವಾ ಮನೋಭಾವ ಗಮನೀಯವಾಗಿದ್ದು ಎಲ್ಲರ ಬದುಕು ಶ್ರೇಯಸ್ಕರವಾಗಲೆಂದು ಶುಭ ಹಾರೈಸಿದರು.
ಈ ವೇಳೆ ಮಲ್ಲಿನಾಥ ಹಿರೇಮಠ ಹಾರಕೂಡ, ಶಾಲೆಯ ಆಡಳಿತ ಅಧಿಕಾರಿ ಐ.ಜಿ. ಮಠಪತಿ, ಪ್ರಾಧ್ಯಾಪಕ ಪರಮೇಶ್ವರ ಹೊಳಕುಂದೆ, ಶಿಕ್ಷಕರಾದ ಅಲ್ಲಮಪ್ರಭು ಹಿರೇಮಠ, ಭೀಮೇಶ ಜೋಜನೆ, ಸುಭಾಷ ರೆಡ್ಡಿ, ಕಮಲಾಕರ ಹತ್ತರಗಾ, ಪಂಡಿತ ಬಿರಾದಾರ, ಪ್ರಲ್ಹಾದ ಚೌವ್ಹಾಣ, ಶಿವಾನಂದ ಪೂಜಾರಿ, ಮಂಜುಳಾ ಹರಕೆ, ಲಲಿತಾ ಬೊಂಬಲೆ, ಶೋಭಾ ಟೊಣಪೆ, ಜ್ಯೋತಿ ಕೆರಗೋಟೆ, ಸುರೇಖಾ ಜಮಾದಾರ, ಮರೆಮ್ಮಾ ಚೌದಾರಿ, ಅಂಜನಾ ಜಮಾದಾರ, ಪವಿತ್ರಾ ಘಾಳೆ, ಭವಾನಿ ಬೊಂಬಲೆ, ದಾನಮ್ಮ ಜೋಜನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಐ.ಜಿ. ಮಠಪತಿ ಸ್ವಾಗತಿಸಿದರೆ, ಸುಭಾಷ ರೆಡ್ಡಿ ನಿರೂಪಿಸಿದರು. ಪರಮೇಶ್ವರ ಹೊಳಕುಂದೆ ವಂದಿಸಿದರು.