ಕನ್ನಡ ಶಾಲೆಗಳಿಗೆ ಸರ್ಕಾರದ ನಿಯಮ ಸಡಲಿಸಿ
ಬೀದರ್:ಜು.16:ಕನ್ನಡ ಶಾಲೆಗಳಿಗೆ ಸರ್ಕಾರದ ನಿಯಮಗಳನ್ನು ಸಡಿಲಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದಿಂದ ಬೀದರ್ನಲ್ಲಿ ಭಾನುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು
ಕ.ಕ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ ಒತ್ತಾಯ
ಕನ್ನಡ ಶಾಲೆಗಳ ಉಳಿವಿಗೆ ನಿಯಮ ಸಡಿಲಿಸಿ
ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಸರ್ಕಾರದ ನಿಯಮಗಳನ್ನು ಸಡಿಲಿಸಬೇಕು ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ನಗರಕ್ಕೆ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ಭಾನುವಾರ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಸರ್ಕಾರದ ಹಲವು ಕಟ್ಟಳೆಗಳ ಕಾರಣದಿಂದಾಗಿ ಜಿಲ್ಲೆಯಲ್ಲಿ ಈಗಾಗಲೇ ಅರ್ಧದಷ್ಟು ಕನ್ನಡ ಶಾಲೆಗಳು ಮುಚ್ಚಿವೆ. ಉಳಿದ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂದು ಸಂಘದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಅವರು ಕನ್ನಡ ಮಾಧ್ಯಮ ಶಾಲೆಗಳ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಸರ್ಕಾರದಿಂದ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುತ್ತಿರುವುದರಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ.ಹೀಗಾಗಿ ಆಂಗ್ಲ ಮಾಧ್ಯಮ ಶಾಲೆ ತೆರೆಯುವುದನ್ನು ಕೈಬಿಡಬೇಕು ಎಂದು ಬೇಡಿಕೆ ಮಂಡಿಸಿದರು.
ರಾಜ್ಯ ಹೈಕೋರ್ಟ್ ಆದೇಶದಂತೆ 10 ವರ್ಷಕ್ಕೊಮ್ಮೆ ಮಾನ್ಯತೆ ನವೀಕರಿಸಬೇಕು. ನಂತರ ಶಾಶ್ವತ ಮಾನ್ಯತೆ ನೀಡಬೇಕು. ಖಾಸಗಿ ಶಾಲೆಗಳನ್ನು ಗುರಿಯಾಗಿಸಿ ರಚಿಸಿರುವ ಅಗ್ನಿ ಅವಘಡ ಸುರಕ್ಷತೆ, ಕಟ್ಟಡದ ಭದ್ರತೆ, ಭೂ ಪರಿವರ್ತನೆ ಕಡ್ಡಾಯ ಮೊದಲಾದ ನಿಯಮಗಳು ಅವೈಜ್ಞಾನಿಕವಾಗಿವೆ. ಈ ನಿಯಮಗಳಿಂದಾಗಿ ಆಗಿರುವ ಸಮಸ್ಯೆಗಳ ಕುರಿತು ಸಮಗ್ರ ಅಧ್ಯಯನ ನಡೆಸಬೇಕು. ಅದರ ಆಧಾರದಲ್ಲಿ ತಕ್ಷಣ ಕ್ರಮ ಜರುಗಿಸಬೇಕು.
1995ರ ನಂತರ ಆರಂಭವಾದ ಎಲ್ಲ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿನ ಶಾಲೆಗಳ ಬಡ ಮಕ್ಕಳಿಗೂ ಬಿಸಿಯೂಟ ಜಾರಿಗೊಳಿಸಬೇಕು. ಬಡ ಮಕ್ಕಳ ಅನುಕೂಲಕ್ಕಾಗಿ ಆರ್ ಟಿ ಇ ಮರು ಜಾರಿಗೊಳಿಸಬೇಕು. ಸಂವಿಧಾನದ 371 (ಜೆ) ತಿದ್ದುಪಡಿ ಕಾಯ್ದೆ ಅನ್ವಯ ಈ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಶೈಕ್ಷಣಿಕ ಸೌಲಭ್ಯಗಳನ್ನು ಕೆಕೆಆರ್‍ಡಿಬಿ ಅಡಿಯಲ್ಲಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಬಿಳಿಮಲೆ ಅವರು ಕನ್ನಡ ಶಾಲೆಗಳ ಉಳಿವಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಘದ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಕುಮಾರ್ ಮಣಿಗಿರೆ, ಬೀದರ್ ತಾಲ್ಲೂಕು ಅಧ್ಯಕ್ಷ ಸಂದೀಪ್ ಶೆಟಕಾರ್, ಪ್ರಮುಖರಾದ ಬಸವಕುಮಾರ್ ಪಾಟೀಲ ಮತ್ತಿತರರು ಇದ್ದರು.