ಎಲ್ಲಾ ಇಲಾಖೆಗಳಲ್ಲಿ ಕನ್ನಡ ಹೆಚ್ಚು ಬಳಕೆಯಾಗಬೇಕು: ಡಾ. ಪುರುಷೋತ್ತಮ ಬಿಳಿಮಲೆ
ಬೀದರ, ಜು.16: ಸರ್ಕಾರದ ವಿವಿಧ ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿಗಳು ಕನ್ನಡ ಹೆಚ್ಚಾಗಿ ಬಳಸಬೇಕು ಹಾಗೂ ಅದನ್ನು ಕರುಳಿನ ಭಾಷೆಯಾಗಿ ಭಾವಿಸಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಬೀದರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಹಿಂದಿ ಶೇ. 66 ಪ್ರತಿಶತ ವೇಗದಲ್ಲಿ ಬೆಳೆಯುತ್ತಿದ್ದರೆ ಬಂಗಾಳಿ ಭಾಷೆ ಶೇ. 27 ಪ್ರತಿಶತ, ತಮಿಳು, ತೆಲುಗು, ಮರಾಠಿ ಹಾಗೂ ಓಡಿಯಾ ಭಾಷೆಗಳು 12.13.14. ಪ್ರತಿಶತ ಬೆಳೆಯುತ್ತಿವೆ ಆದರೆ ನಮ್ಮ ಕನ್ನಡ 3.73 ಪ್ರತಿಶತ ಬೆಳೆಯುತ್ತಿದೆ ಎಂದು ಸರಕಾರಿ ಅಂಕಿ ಅಂಶಗಳೆ ಹೇಳುತ್ತವೆ. ನಾವು ಕನ್ನಡ ಭಾಷೆ ಕುರಿತು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಇದು ಕೇವಲ ಆಡು ಭಾಷೆಯಾಗಿ ಉಳಿಯ ಕಾಲ ಬಹಳ ದೂರವಿಲ್ಲ ಎಂದರು.
ನಾವು ಬೇರೆ ಬೇರೆ ವಿಷಯಗಳ ಕುರಿತು ಮಾತನಾಡುತ್ತೆವೆ ಆದರೆ ಕನ್ನಡೀಕರಣಕ್ಕಾಗಿ ಏಕೆ ಮಾತನಾಡುವುದಿಲ್ಲ. 27 ಕಡೆ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದು ಗೂಡಿಸಲು ಹಲವಾರು ಜನರು ಹೋರಾಟಮಾಡಿ ನಮ್ಮನ್ನು ಒಂದು ಗೂಡಿಸಿದ್ದಾರೆ. ಇದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿದಂತೆ ಹಲವಾರು ಜನರು ಕನ್ನಡ ಉಳಿವಿಗಾಗಿ ಹೋರಾಡಿದ್ದಾರೆ ಅದನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ಭಾರತದ ಅತ್ಯಂತ ಪ್ರಭಾವಶಾಲಿ ಭಾಷೆಗಳಲ್ಲಿ ಕನ್ನಡ ಒಂದು ಪ್ರಚಂಡ ಭಾಷೆಯಾಗಿದೆ. ನಮ್ಮ ಪರಂಪರೆ ಕಲಿಯಲು. ಮಾತೃಭಾಷೆ ಅಸ್ಮಿತೆ ಉಳಿಸಲು ನಾವು ಅದನ್ನು ಉಳಿಸಿಕೊಂಡು ಹೋಗಬೇಕಿದೆ ಇಲ್ಲವಾದರೆ ನಮ್ಮನ್ನು ನಾವೇ ಆತ್ಮಹತ್ಯೆ ಮಾಡಿಕೊಂಡಂತೆ ಆಗುತ್ತದೆ.
ಪ್ರತಿ ಶಾಸಕರಿಗೆ 5 ಶಾಲೆಗಳನ್ನು ದತ್ತು ನೀಡಿ ಅವರಿಗೆ ಬರುವ ಅನುದಾನದಲ್ಲಿ ಆ ಶಾಲೆಗಳ ಅಭಿವೃದ್ಧಿ ಮಾಡುವುದು ಹಾಗೂ ಮದರಸಾಗಳಲ್ಲಿ ವಾರಕ್ಕೆ 2 ಗಂಟೆ ಕನ್ನಡ ಕಲಿಸುವದು ಇದನ್ನು ಪಾಯಲೆಟ ಪೆÇ್ರಜೆಕಟ್ ರೀತಿಯಲ್ಲಿ ಬೆಂಗಳೂರಿನ ಕಲಾಸಿಪಾಳ್ಯ, ವಿಜಯಪುರ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಯಲ್ಲಿ ನಮ್ಮ ಪ್ರಾಧಿಕಾರದ ವತಿಯಿಂದ ಈ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಅವರು ಮಾತನಾಡಿ, ಬೀದರ ಗಡಿ ಜಿಲ್ಲೆಗೆ ಐದು ಭಾಷೆಗಳ ಸಂಗಮವಿದೆ ಕನ್ನಡ ಕಡ್ಡಾಯಗೊಳಿಸಬೇಕು. ಕನ್ನಡ ಅನುಷ್ಠಾನ ಕಾಗದ ಪತ್ರಗಳ ಚಲಾವಣೆ ಮಾಹಿತಿ ಕೇವಲ 16 ಇಲಾಖೆಗಳು ನೀಡಿವೆ. ಅಂತರ್ಜಾಲದಲ್ಲಿ ಡಿಪಾರ್ಟ್ ಕನ್ನಡ ಇರಬೇಕು ಕೇವಲ 5 ಇಲಾಖೆಗಳಲ್ಲಿ ಮಾತ್ರ ಇವೆ. ನ್ಯಾಯಾಲಯ, ಆರೋಗ್ಯ ಇಲಾಖೆ, ಪೆÇಲೀಸ್ ಸೇರಿದಂತೆ ಇತರೆ ಎಲ್ಲಾ ಇಲಾಖೆಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕು ಎಂದರು.
ನಾಮ ಫಲಕಗಳು ಕನ್ನಡದಲ್ಲಿ ಶೇ. 60 ಪ್ರತಿಶತ ಇರಬೇಕು. ಈ ಕುರಿತು ವ್ಯಾಪಾರಿಗಳ ಸಭೆ ಕರೆದು ಅವರಿಗೆ ನಿರ್ದೆಶನ ನೀಡಿ ಎಂದು ನಗರಸಭೆ ಆಯುಕ್ತರಿಗೆ ತಿಳಿಸಿದರು. ಲೋಕೋಪಯೋಗಿ ಇಲಾಖೆಯ ಟೆಂಡರಗಳನ್ನು ಕನ್ನಡದಲ್ಲಿ ಕೊಡಬೇಕು. ಖಜಾನೆ ಇಲಾಖೆಯ ಬಿಲ್ಲುಗಳನ್ನು ಮಾಡುವಾಗ ಅಲ್ಲಿ ಎಲ್ಲಾ ಬಿಲ್ಲುಗಳು ಕನ್ನಡಲ್ಲಿರುವಂತೆ ನೋಡಿಕೊಳ್ಳಬೇಕು. ಗಡಿ ಭಾಗದಲ್ಲಿ ಕಲಿಯುವ ಕನ್ನಡೇತರ ಮಕ್ಕಳ ಕಲಿಕೆಯ ಮಾಹಿತಿ ನೀಡಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಮಾತನಾಡಿ, ಕನ್ನಡ ಉಳಿಸಿ ಬೆಳೆಸಬೇಕಾದರೆ ನಮ್ಮ ಆತ್ಮಾವಲೋಕನ ನಾವೇ ಮಾಡಿಕೊಳ್ಳಬೇಕಿದೆ. ಜಿಲ್ಲಾಧಿಕಾರಿ ಕಛೇರಿಯಲ್ಲಿ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ನಡೆಯುತ್ತವೆ. ತಾವು ಹೇಳಿದ ಎಲ್ಲವುಗಳಿಗೆ 15 ದಿನಗಳಲ್ಲಿ ಅನುಪಾಲನ ವರದಿ ಕೊಡುತ್ತೆವೆ ಮತ್ತು ನಮ್ಮ ಅಧಿಕಾರಿಗಳಿಗೆ ಈ ಕುರಿತು ನಿರ್ದೆಶನ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮಾತನಾಡಿ, ನಗರಸಭೆ ಕಸದ ವಾಹನಗಳಲ್ಲಿ ಹಿಂದಿ ಹಾಡುಗಳನ್ನು ದಿನಾಲು ಹಾಕುತ್ತಾರೆ ಅವುಗಳನ್ನು ಕನ್ನಡದಲ್ಲಿ ಹಾಕಬೇಕು. ಕೆಲವೊಂದು ಊರಿನ ಬೋರ್ಡಗಳಲ್ಲಿ ಕನ್ನಡದಲ್ಲಿ ತಪ್ಪಾಗಿ ಬರೆಯಲಾಗಿದೆ ಮತ್ತು ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಶೇ. 50 ಪ್ರತಿಶತ ಶಿಕ್ಷಕರೆ ಇಲ್ಲ ಎಂದು ಹೇಳಿದರು.
ಈ ಸಭೆಯಲ್ಲಿ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಮಹೇಶ ಮೆಘಣ್ಣವರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಂಜೀವಕುಮಾರ ಅತಿವಾಳೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಸಿದ್ರಾಮ ಶಿಂಧೆ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಾದ ಸಲೀಂ ಪಾಶಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಚಂದ್ರಕಾಂತ ಶಾಬಾದಕರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ, ಶಿವಶಂಕರ ಟೋಕರೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.