ಜೆ ಎನ್ ಕೋಟೆ ಗ್ರಾಮದಲ್ಲಿ ಡೆಂಗ್ಯೂ ಜಾಗೃತಿ ಜಾಥ

ಸಂಜೆವಾಣಿ ವಾರ್ತೆ
ಚಿತ್ರದುರ್ಗ: ಜು.೧೪; ಡೆಂಗ್ಯೂ ರೋಗ ಈಗ ಎಲ್ಲೆಡೆ ಆತಂಕ ಸೃಷ್ಟಿ ಮಾಡುತ್ತಿದೆ ಡೆಂಗ್ಯೂ ಹರಡಲು ಮುಖ್ಯ  ಕಾರಣ ಸೊಳ್ಳೆಗಳು ಈ ಸೊಳ್ಳೆಗಳನ್ನು ನಿಯಂತ್ರಿಸದಿದ್ದರೆ ಡೆಂಗ್ಯೂ ರೋಗ ಹರಡುವುದನ್ನು ತಡೆಯುವುದು ಕಷ್ಟ ಅದಕ್ಕಾಗಿ ಸೊಳ್ಳೆಗಳು ವಾಸಮಾಡುವ ನಮ್ಮ ಮನೆ ಸುತ್ತಮುತ್ತಲು ಕಸ ಶೇಖರಣೆಯಾಗದಂತೆ ಹಾಗೂ ಯಾವುದೇ ತರಹದ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಪ್ಪುಗಳು ಮನೆಯ ಹತ್ತಿರ ಸುಳಿಯದಂತೆ ಮನೆಯ ಸುತ್ತಲೂ ತುಳಸಿಗಿಡಗಳನ್ನು ಹೆಚ್ಚಾಗಿ ಬೆಳೆಸಿ ಮತ್ತು ಪ್ರತಿದಿನ  5ರಿಂದ 6 ತುಳಸಿ ಎಲೆಗಳನ್ನು ಜಗಿದು ತಿನ್ನಿ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ  ಎಂದು ಯೋಗ ಗುರು ರವಿ ಕೆ.ಅಂಬೇಕರ್ ಗ್ರಾಮಸ್ಥರಿಗೆ ಸಲಹೆ ನೀಡಿದರು.ಅವರು  ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆಯ ಸರ್ಕಾರಿ ಪ್ರಾಥಮಿಕ ಆಯುರ್ವೇದ ಚಿಕಿತ್ಸಾಲಯ ಜೆ ಎನ್ ಕೋಟೆ ಇವರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ ನಿಯಂತ್ರಣ ಜಾಗೃತಿ ಜಾಥದ ನೇತೃತ್ವ ವಹಿಸಿ ಮಾತನಾಡುತ್ತಾ ಡೆಂಗ್ಯೂ ರೋಗಕ್ಕೆ ಇದುವರೆಗೆ ಯಾವುದೇ ನಿರ್ದಿಷ್ಟ ಔಷಧ ಕಂಡುಹಿಡಿಯಲಾಗಿಲ್ಲ ಸಾಮಾನ್ಯ ಜ್ವರಕ್ಕೆ ನೀಡುವ ಔಷಧ ಮಾತ್ರೆಗಳನ್ನೆ ನೀಡಲಾಗುತ್ತಿದೆ ಅದಕ್ಕಾಗಿ ಯಾರಿಗಾದರೂ ಸಾಮಾನ್ಯ ಜ್ವರ ಬಂದಾಗ ನಿರ್ಲಕ್ಷ್ಯ ತೋರದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿ ಚಿಕಿತ್ಸೆ ಪಡೆಯಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೊಳ್ಳೆಗಳು ಕಚ್ಚಿದ ತಕ್ಷಣ ಜ್ವರ ಬರುವ ಸಂಭವ ಹೆಚ್ಚು ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅವಶ್ಯಕ ಅದಕ್ಕಾಗಿ ಊಟದ ಜೊತೆಗೆ ಪಪ್ಪಾಯಿಹಣ್ಣು ಸೇವಿಸುವುದರೊಂದಿಗೆ ಪ್ರತಿದಿನ ಯೋಗ ವ್ಯಾಯಾಮ ಮಾಡುವುದು ಅವಶ್ಯಕ ಅದಕ್ಕಾಗಿ ಆಯುಷ್ ಇಲಾಖೆಯು ಜೆ ಎನ್ ಕೋಟೆ ಆಯುರ್ವೇದ ಚಿಕಿತ್ಸಾಲಯ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಉಚಿತ ಯೋಗ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ ಪ್ರತಿಯೊಬ್ಬರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.