ಅನಗತ್ಯ ಬೀಮ್ ಲೈಟ್ ಬಳಕೆ ೨೩೪ ಪ್ರಕರಣ ದಾಖಲು
ಬೆಂಗಳೂರು,ಜು.೧೬- ನಗರದಲ್ಲಿ ಅನಗತ್ಯವಾಗಿ ಹೈ – ಬೀಮ್ ಲೈಟ್ ಉಪಯೋಗಿಸುತ್ತಿದ್ದ ವಾಹನ ಚಾಲಕರ ವಿರುದ್ಧ ನಿನ್ನೆ ರಾತ್ರಿ ವಿಶೇಷ ಕಾರ್ಯಾಚರಣೆ ಕೈಗೊಂಡ ಸಂಚಾರ ಪೊಲೀಸರು ೨೩೪ ಪ್ರಕರಣಗಳನ್ನು ದಾಖಲಿಸಿ ೧.೦೮ ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆ ಸಂಭವಿಸುವ ಅಪಘಾತಗಳಿಗೆ ಹೈ – ಬೀಮ್ ಲೈಟ್ ಬಳಕೆ ಕಾರಣವಾಗುವುದನ್ನು ಗಂಭೀರವಾಗಿ ಪರಿಗಣಿಸಿ ಅಶೋಕನಗರ, ಸದಾಶಿವನಗರ, ಶೇಷಾದ್ರಿಪುರಂ, ಹಲಸೂರು ಗೇಟ್, ವಿಲ್ಸನ್ ಗಾರ್ಡನ್, ಉಪ್ಪಾರಪೇಟೆ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ ಸೇರಿದಂತೆ ೧೩ ಸಂಚಾರ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಈ ವೇಳೆ, ನಿಯಮ ಉಲ್ಲಂಘಿಸಿ ಹೈ – ಬೀಮ್ ಲೈಟ್ ಬಳಸುತ್ತಿದ್ದವರಿಗೆ ದಂಡ ವಿಧಿಸಲಾಗಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೈ-ಬೀಮ್ ಹೆಡ್‌ಲೈಟ್‌ಗಳು ಸಾಮಾನ್ಯ ಹೆಡ್‌ಲೈಟ್‌ಗಳಿಗಿಂತಲೂ ಹೆಚ್ಚು ಪ್ರಕಾಶವಾದ ಬೆಳಕನ್ನ ಹೊರ ಸೂಸುತ್ತವೆ. ಅವುಗಳನ್ನ ಸೂಕ್ತವಾಗಿ ಬಳಸದಿದ್ದರೆ ಇತರ ವಾಹನ ಚಾಲಕರಿಗೆ ಅಡ್ಡಿಪಡಿಸಬಹುದು ಅಥವಾ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ.
೧೯೮೯ರ ಕೇಂದ್ರ ಮೋಟಾರು ವಾಹನ ಕಾಯ್ದೆ ಅನುಸಾರ ”ವಾಹನದ ಮುಂಬದಿಯ ರಸ್ತೆ ಗೋಚರಿಸದಿದ್ದಾಗ (ಮಂಜು, ಹೊಗೆ, ಮಳೆ, ದಟ್ಟ ಕತ್ತಲು ಕವಿದ ಮತ್ತಿತರ ಸಂದರ್ಭಗಳಲ್ಲಿ) ಹೈ – ಬೀಮ್ ಹೆಡ್??ಲೈಟ್ಸ್ ಬಳಸಬಹುದು. ಆದರೆ, ನಿಮ್ಮ ವಾಹನದ ಮುಂದಿರುವ ವಾಹನದ ಹಿಂದಿನ ದೀಪಗಳ ಬೆಳಕು ನಿಮಗೆ ರಸ್ತೆ ಗೋಚರಿಸಲು ಸಹಾಯವಾಗುತ್ತಿಲ್ಲ ಅಥವಾ ಮುಂದೆ ಯಾರೂ ಇಲ್ಲ ಎಂದರಷ್ಟೇ ಹೈ – ಬೀಮ್ ಬಳಸಬಹುದಾಗಿದೆ. ಮತ್ತು ಎದುರು ದಿಕ್ಕಿನಿಂದ ಮತ್ತೊಂದು ವಾಹನ ಬಂದಾಗ/ಜನವಸತಿ ಪ್ರದೇಶಗಳಲ್ಲಿ/ನಗರ ಪ್ರದೇಶಗಳಲ್ಲಿ/ಸಂಚಾರ ದಟ್ಟಣೆಯಿರುವ ಕಡೆಗಳಲ್ಲಿ ಹೈ-ಬೀಮ್ ಬಳಸುವಂತಿಲ್ಲ.