ತುಮಕೂರು- ಚಿತ್ರದುರ್ಗ ನಡುವೆ ವಿಮಾನ ನಿಲ್ದಾಣ ಪ್ರಸ್ತಾವನೆ ಇಲ್ಲ
ಬೆಂಗಳೂರು, ಜು.೧೬-ತುಮಕೂರು ಹಾಗೂ ಚಿತ್ರದುರ್ಗ ಮಧ್ಯದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ವಿಧಾನ ಪರಿಷತ್ತಿನಲ್ಲಿ ಇಂದು ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸದಸ್ಯ ಕೆ.ಎಸ್.ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹಿರಿಯೂರು ಚಿತ್ರದುರ್ಗ ನಡುವೆ ಪ್ರಸ್ತಾವದ ಏರಿಯ ಇಂಡಸ್ಟ್ರೀಯಲ್ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಹಿರಿಯೂರು ತಾಲ್ಲೂಕಿನ, ಐಮಂಗಳ ಹೋಬಳಿ, ಮೇಟಿಕುರ್ಕಿ ಮತ್ತು ಕರಿಓಬೇನಹಳ್ಳಿ ಗ್ರಾಮಗಳಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಯೋಜನೆಗಾಗಿ ೧೧೫೬-೧೨.೦೮ ಎಕರೆ ವಿಸ್ತೀರ್ಣದ ಜಮೀನಿಗೆ ಅಧಿಸೂಚನೆ ಹೊರಡಿಸಿದ್ದು, ಈ ಪೈಕಿ ೯೨೦-೩೨ ಎಕರೆ ವಿಸ್ತೀರ್ಣದ ಜಮೀನಿಗೆ ಪರಿಹಾರ ಪಾವತಿಸಿದ್ದು, ಉಳಿದ ೨೩೫-೨೦.೦೮ ಎಕರೆ ಜಮೀನಿಗೆ ಪರಿಹಾರ ಪಾವತಿಸುವುದು ಬಾಕಿಯಿರಲಿದೆ ಎಂದು ತಿಳಿಸಿದರು.
ಕೆಐಎಡಿಬಿ ವತಿಯಿಂದ ಚಿತ್ರದುರ್ಗ ತಾಲ್ಲೂಕು, ಮೇಟಿಕುರ್ಕಿ ಕೈಗಾರಿಕಾ ಪ್ರದೇಶವನ್ನು ಒಟ್ಟು ೧೧೫೬.೩೧ ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಈ ಸಂಬಂಧ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದರು.
ಅನುಮೋದಿತ ನಕ್ಷೆಯಲ್ಲಿ ೭೬೪.೮೩ ಎಕರ ಪ್ರದೇಶವನ್ನು ಕೈಗಾರಿಕಾ ಘಟಕಗಳ ಸ್ಥಾಪನೆಗೆ ಮೀಸಲಿರಿಸಲಾಗಿದ್ದು, ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ ೨೦೨೫ ರೊಳಗಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ನಂತರ ಕೈಗಾರಿಕೆಗಳಿಗೆ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.