ಪಠ್ಯವಿಷಯದ ಪುನರ್‌ಮನನ ಅಗತ್ಯ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೬: ಶಿಕ್ಷಕರು ಪಠ್ಯವಿಷಯವನ್ನು ಆಳವಾಗಿ ಅಧ್ಯಯನ ಮಾಡುವುದರ ಮೂಲಕ ಪುನರ್ ಮನನ ಮಾಡಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನಾಧಿಕಾರಿಗಳಿಗೆ ಸೋಮವಾರ ಆಯೋಜಿಸಿದ್ದ 1 ರಿಂದ 10 ನೇ ತರಗತಿಯ ಪಠ್ಯಪುಸ್ತಕ ಅಧ್ಯಯನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ವಿಷಯವಾರು ತರಬೇತಿ ನೀಡಲಾಗುತ್ತಿದೆ. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ವಿವಿಧ ರೀತಿಯ ಬೋಧನಾ ವಿಧಾನ, ಬೋಧನಾ ತಂತ್ರಗಳನ್ನು ಅಳವಡಿಸಿಕೊಂಡು ಪಠ್ಯ ವಿಷಯವನ್ನು ಕಲಿಸಬೇಕು. ಈ ನಿಟ್ಟಿನಲ್ಲಿ ಡಿ.ಎಸ್.ಇ.ಆರ್.ಟಿ(ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ) ನಿರ್ದೇಶಕರ ಮಾರ್ಗದರ್ಶನದಂತೆ ಜಿಲ್ಲಾ ಮತ್ತು ಬ್ಲಾಕ್ ಹಂತದ ಅನುಷ್ಟಾನಾಧಿಕಾರಿಗಳಿಗೆ 1 ರಿಂದ 10 ನೇ ತರಗತಿಯ ಪಠ್ಯಪುಸ್ತಕ ಅಧ್ಯಯನ ಕಾರ್ಯಾಗಾರ ಆಯೋಜಿಸಲಾಗಿದೆ. ಅನುಷ್ಠಾನಾಧಿಕಾರಿಗಳು ವಿಷಯ ಬೋಧನೆಗೆ ಪೂರಕವಾದ ಬೋಧನಾ ವಿಧಾನ ಮತ್ತು ತಂತ್ರಗಳನ್ನು ಗುರುತಿಸಿಕೊಳ್ಳಬೇಕು. ಶಿಕ್ಷಕರಿಗೆ ಬೋಧನಾ ವಿಷಯದಲ್ಲಿ ಕ್ಲಿಷ್ಟವಾಗುವ ಪರಿಕಲ್ಪನೆ ಅರ್ಥೈಸುವಿಕೆಗೆ ಮಾರ್ಗದರ್ಶನ ಮಾಡಬೇಕು ಎಂದರು.ಉಪ ಪ್ರಾಂಶುಪಾಲ ಅಶ್ವಥ್ ನಾರಾಯಣ, ಹಿರಿಯ ಉಪನ್ಯಾಸಕರಾದ ಪೂರ್ಣಿಮಾ, ಎಸ್.ಜ್ಞಾನೇಶ್ವರ, ತಿಪ್ಪೇಸ್ವಾಮಿ, ಉಪನ್ಯಾಸಕರಾದ ಕೆ.ಜಿ.ಪ್ರಶಾಂತ್, ಎಸ್.ಬಸವರಾಜು, ಎನ್.ರಾಘವೇಂದ್ರ, ಸಿ.ಎಸ್.ಲೀಲಾವತಿ, ವಿ.ಕನಕಮ್ಮ, ನಿತ್ಯಾನಂದ, ಶಿವಲೀಲಾ, ರೇವಣ್ಣ, ಶಿವಲೀಲಾ, ರಂಗಸ್ವಾಮಿ, ಕಚೇರಿ ಅಧೀಕ್ಷಕ ದೇವೇಂದ್ರಪ್ಪ ಇದ್ದರು.