ಪಿ.ಎಂ. ಸ್ವನಿಧಿ ಯೋಜನೆ ಲಾಭಗಳ ಕುರಿತು ಫಲಾನುಭವಿಗಳಿಗೆ ಅರಿವು ಮೂಡಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೬;  ಪಿ.ಎಂ.ಸ್ವನಿಧಿ ಯೋಜನೆಯ ಲಾಭಗಳ ಕುರಿತು ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಜರುಗಿದ ಜಿಲ್ಲಾ ಕೌಶಲ್ಯ ಮಿಷನ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೀದಿ ಬದಿ ವ್ಯಾಪಾರಸ್ಥರಿಗಾಗಿಯೇ ಪಿ.ಎಂ. ಸ್ವನಿಧಿ ಕಿರು ಸಾಲ ಸೌಲಭ್ಯ ಯೋಜನೆ ಜಾರಿ ಮಾಡಲಾಗಿದೆ. ಯೋಜನೆಯಡಿ ಮೂರು ಹಂತಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತಿದೆ. ಆದರೆ ಮೊದಲ ಹಂತದಲ್ಲಿ ರೂ.10,000/- ಸಾಲ ಪಡೆದವರು, ಸಾಲ ಮರುಪಾವತಿ ಮಾಡದೇ, ಎರಡು ಹಾಗೂ ಮೂರನೇ ಹಂತದ ಸಾಲ ಪಡೆಯಲು ಅನರ್ಹರಾಗುತ್ತಿದ್ದಾರೆ.  ಹೀಗಾಗಿ ಮೊದಲ ಹಂತದಲ್ಲಿ ಸಾಲ ಪಡೆದವರು, ಕಾಲಕ್ಕೆ ಸರಿಯಾಗಿ ಮರುಪಾವತಿಸಿದಲ್ಲಿ, ಅಂತಹವರಿಗೆ ಎರಡು ಹಾಗೂ ಮೂರನೆ ಹಂತದಲ್ಲಿ ನೀಡಲಾಗುವ ಸಾಲಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಸಮರ್ಪಕವಾಗಿ ಅರಿವು ಮೂಡಿಸಬೇಕು ಎಂದರು.