ರಂಗಮಂದಿರ ಪೂರ್ಣಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ಗುಳೇದಗುಡ್ಡ,ಜು16: ಕರ್ನಾಟಕದ ಷೇಕ್ಸಪಿಯರ್ ಎಂದೇ ಖ್ಯಾತರಾಗಿದ್ದ ಕವಿ, ನಾಟಕಕಾರ ದಿ. ಕಂದಗಲ್ಲ ಹನಮಂತರಾಯರ ಕರ್ಮಭೂಮಿ ಗುಳೇದಗುಡ್ಡವಾಗಿದ್ದು, ರಂಗಭೂಮಿ ಚಟುವಟಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಿ. ಕಂದಗಲ್ ಹನಮಂತರಾಯ ಹೆಸರಿನಲ್ಲಿ ಗುಳೇದಗುಡ್ಡದಲ್ಲಿ ಒಂದು ಸುಸಜ್ಜಿತ ರಂಗಭೂಮಿ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಕಲಾವಿದರ, ಸಾರ್ವಜನಿಕರ ಆಶಯವಾಗಿತ್ತು. ಆದರೆ ರಂಗಮಂದಿರ ಸುಮಾರು ಮೂವತ್ತು ವರ್ಷಗಳಿಂದ ಅರ್ಧಕ್ಕೆ ನಿಂತಿರುವುದು ದುರಾದೃಷ್ಟವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ರವಿ ಅಂಗಡಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಕರವೇ ವತಿಯಿಂದ ಪ್ರತಿಭಟನಾ ಕೈಗೊಂಡು ಹಲವಾರು ವರ್ಷಗಳಿಂದ ಅರ್ಧಕ್ಕೆ ನಿಂತಿರುವ ನಾಟಕಕಾರ ದಿ. ಕಂದಗಲ್ಲ ಹನಮಂತರಾಯರ ರಂಗಮಂದಿರ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರವೇ ವತಿಯಿಂದ ಉಪತಹಶೀಲ್ದಾರ ವೀರೇಶ ಬಡಿಗೇರ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿ, ಸರಕಾರ ಕೂಡಲೇ ರಂಗಮಂದಿರಕ್ಕೆ ಅವಶ್ಯಕ ಅನುದಾನ ಬಿಡಗಡೆಮಾಡಿ, ದಿ. ಕಂದಗಲ್ಲ ಹನಮಂತರಾಯ ಹೆಸರಿನಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಿ, ರಂಭೂಮಿ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಸಾಮಾಜಿಕ ಕಾರ್ಯಕರ್ತ ಅಶೋಕ ಹೆಗಡೆ ಮಾತನಾಡಿ, ರಂಗಭೂಮಿ ಚಟುವಟಿಕೆಗೆ ಹೆಸರುವಾಸಿಯಾದ ಗುಳೇದಗುಡ್ಡ ಪಟ್ಟಣದಲ್ಲಿ ಒಂದು ಸುಸಜ್ಜಿತ ರಂಗಮಂದಿರ ಇರದೇ ಇರುವುದು ಬೇಸರದ ಸಂಗತಿ. ಹಲವಾರು ವರ್ಷಗಳಿಂದ ಪಾಳುಬಿದ್ದು ನಿಂತು, ಕಟ್ಟಡದಲ್ಲಿ ಮಳ್ಳುಕಂಠಿಗಳು ಬೆಳೆದುನಿಂತಿರುವುದು ವಿಷಾಧನೀಯ ಎಂದರು.
ಇದಕ್ಕೂ ಮೊದಲು ಪಟ್ಟಣದ ಗಚ್ಚಿನಕಟ್ಟಿ ಬಳಿ ಕನ್ನಡದ ನಿರೂಪಕಿ ಅಪರ್ಣಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಪ್ರತಿಭಟನೆ ಪ್ರಾರಂಭಗೊಳಿಸಲಾಯಿತು. ಪ್ರತಿಭಟನೆ ಚೌಬಜಾರ, ಅರಳಿಕಟ್ಟೆ, ಪುರಸಭೆ, ಭಾರತ್ ಮಾರ್ಕೆಟ್ ಮೂಲಕ ಹಾಯ್ದು ಕಂದಗಲ್ ಹನಮಂತರಾಯರ ರಂಗಮಂದಿರಕ್ಕೆ ಬಂದು ತಲುಪಿತು, ಬಳಿಕ ಉಪತಹಶಿಲ್ದಾರರರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಲಾವಿದರು ವೇಷಭೂಷಣಗಳನ್ನು ಹಾಕಿ ಗಮನಸೆಳೆದರು.
ಈ ಸಂದರ್ಭದಲ್ಲಿ ಶೇಖರಪ್ಪ ಹೊಸಮನಿ, ಶ್ರೀಕಾಂತ ಹುನಗುಂದ, ನಿಂಗಪ್ಪ ಯಣ್ಣಿ, ಈಶ್ವರ ಕಂಠಿ, ಸೋಮು ಕಲ್ಬುರ್ಗಿ, ವಿಜಯ ಕವಿಶೆಟ್ಟಿ, ಹನಮಂತ ರೂಡಗಿ, ಶಿವಪ್ಪ ರೂಡಗಿ, ಶಂಕರ ಲಕ್ಕುಂಡಿ, ಸಂಗಯ್ಯ ಹಿರೇಮಠ, ಶಿವು ಉದ್ನೂರ, ರೆಡ್ಡಿ ನಡುವಿನಮನಿ, ಪ್ರಕಾಶ ಗಾಯದ, ಶಿವಾನಂದ ಮನಗೂಳಿ, ಅಕ್ತರಹುಸೇನ ಅಫಘಾನ, ಮಲ್ಲಿಕಾರ್ಜುನ ರಾಜನಾಳ, ಅಶೋಕ ರೋಜಿ, ಮಹಾಂತೇಶ ತಿಪ್ಪಾ ಮತ್ತಿತರರು ಇದ್ದರು.