ಬೈರಂಪಾದ ಬ್ಯಾರೇಜ್ ನಿರ್ಮಾಣ ಆಗ್ರಹಿಸಿ ಡಿಸಿಗೆ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಹರಿಯುವ ತುಂಗಭದ್ರ ನದಿಗೆ ಮೂಗಿನಗೊಂದಿ ಬಳಿಯ ಬೈರನಪಾದ ಬ್ಯಾರೇಜ್ ನಿರ್ಮಾಣ ಮಾಡಿದರೆ ನೀರಿನ ಕೊರತೆ ನೀಗಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ರೈತ ಸಂಘದ ನಿಯೋಗವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.ತುಂಗ-ಭದ್ರ ನದಿಯ ಅಗಲ 500 ರಿಂದ 700 ಅಡಿ, 3 ಕಿ.ಮೀ.ಉದ್ದ, 15 ರಿಂದ 20 ಅಡಿ ಎತ್ತರ ಪ್ರದೇಶವಿರುತ್ತದೆ. ಈ ಬ್ಯಾರೇಜ್‍ನಿಂದ ಯಾವುದೇ ರೈತರ ಭೂಮಿ ಭೂಸ್ವಾಧೀನವಾಗುವುದಿಲ್ಲ. ಈ ಬ್ಯಾರೇಜ್‍ನಿಂದ ಸುಮಾರು ಮಳೆಗಾಲದಲ್ಲಿ 15 ಟಿ.ಎಂ.ಸಿ. ಬೇಸಿಗೆಯಲ್ಲಿ 10 ಟಿ.ಎಂ.ಸಿ.ನೀರನ್ನು ಸಂಗ್ರಹಿಸಬಹುದು. ಮಳೆಗಾಲದಲ್ಲಿ ನೀರು ತುಂಬಿದರೆ ಬ್ಯಾರೇಜ್ ನೀರನ್ನು ಬೇಸಿಗೆ ಹಂಗಾಮಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮತ್ತು ಕಾಡಿನಲ್ಲಿರುವ ಜಾನುವಾರುಗಳಿಗೆ ನೀರಿನ ಲಭ್ಯತೆ ಆಗಲಿದ್ದು, ಕಾಡು ಪ್ರಾಣಿಗಳು ನೀರನ್ನು ಹರಸಿ, ಸುತ್ತಮುತ್ತಲಿನ ಗ್ರಾಮಗಳಿಗೆ ಬರುವುದನ್ನು ತಪ್ಪಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.ಬೇಸಿಗೆ ಹಂಗಾಮಿನಲ್ಲಿ ಭದ್ರ ಡ್ಯಾಂನಿಂದ ಬರುವ ನೀರನ್ನು ಕಾಯದೆ, ಬೈರನಪಾದ ಬ್ಯಾರೇಜ್ ನೀರನ್ನು ಬಳಸಬಹುದು, ಇದಲ್ಲದೇ ಕೆಳಭಾಗದ ಜಿಲ್ಲೆಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕೆಳಭಾಗದ ಜಿಲ್ಲೆಗಳಿಗೆ ಅವಶ್ಯಕವಿದ್ದಲ್ಲಿ 2-3 ಟಿ.ಎಂ.ಸಿ. ನೀರನ್ನು ಈ ಬ್ಯಾರೇಜ್‍ನಿಂದಲೇ ಬಿಡಬಹುದು. ನಂತರ ಭದ್ರ ಡ್ಯಾಂನಿಂದ ಕೆಳ ಭಾಗದಲ್ಲಿ ಕೊಡುವ ನೀರಿನ ಕೊರತೆಯನ್ನು ಸಹ ನೀಗಿಸಬಹುದು ಎಂದು ಮನವರಿಕೆ ಮಾಡಿದರು. ಈ ಕುರಿತು ಈಗಾಗಲೇ ಹಿಂದಿನ ಜಿಲ್ಲಾಧಿಕಾರಿಗಳು ಸಭೆ ಕರೆದು, ಸಂಬಂಧಿಸಿದ ಮಲೇಬೆನ್ನೂರಿನ ಭದ್ರಾ ನಾಲ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದ್ದರೂ ಯಾವುದೇ ಗಣನೆಗೆ ತೆಗೆದುಕೊಂಡಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನೀಲಿ ನಕ್ಷೆ ತಯಾರು ಮಾಡಲು ಸೂಚನೆ ನೀಡುವ ಜೊತೆ ಜಿಲ್ಲಾಧಿಕಾರಿಗಳು ಸ್ಥಳ ವೀಕ್ಷಣೆ ಮಾಡುವಂತೆ ಮನವಿ ಮಾಡಿದರು.
——————————