ಬದಲಾವಣೆಯಾಗಿರುವ ಕಾನೂನುಗಳು ಜನರ ಆಕಾಂಕ್ಷೆಗಳಿಗೆ ತಕ್ಕಂತಿವೆ; ಡಾ.ಡಿ.ವಿ ಗುರುಪ್ರಸಾದ್
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೬; ಕೇಂದ್ರ ಸರ್ಕಾರ ಪ್ರಸ್ತುತ ಬದಲಾವಣೆ ಮಾಡಿರುವ ಮೂರು ಅಪರಾಧಿಕ ಕಾನೂನುಗಳಲ್ಲಿ ಹಿಂದೆ ಶಿಕ್ಷೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆದರೆ, ಈಗ ನ್ಯಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಲೇಖಕ ಡಾ.ಡಿ.ವಿ. ಗುರುಪ್ರಸಾದ್ ತಿಳಿಸಿದರು.ಜಿಲ್ಲಾ ವಕೀಲರ ಸಂಘ, ಆರ್.ಎಲ್. ಕಾನೂನು ಕಾಲೇಜು, ಲಾಯರ‍್ಸ್ ಲಾ ಪಬ್ಲಿಷರ‍್ಸ್ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ಅವರು ರಚಿಸಿರುವ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಸರ್ಕಾರ ಮೂರು ಅಪರಾಧಿಕ ಕಾನೂನುಗಳನ್ನು ಬದಲಾವಣೆ ಮಾಡಿದ್ದು, ಅದರಲ್ಲಿ ಎರಡು ಬ್ರಿಟೀಷರ ಕಾಲದ ಹಳೆಯ ಕಾನೂನುಗಳು ಮತ್ತೊಂದು ಸುಮಾರು ಅರ್ಧ ಶತಕದಷ್ಟು ಹಳೆಯ ಕಾನೂನಾಗಿದೆ. ಆದ್ದರಿಂದ ಈ ಮೂರು ಕಾನೂನುಗಳನ್ನು ಬದಲಾವಣೆ ಮಾಡಿದೆ. ಆಗ ಈ ಮೂರು ಕಾನೂನುಗಳಲ್ಲಿ ಶಿಕ್ಷೆಗೆ ಪ್ರಾಧಾನ್ಯತೆ ನೀಡಲಾಗಿತ್ತು ಈಗ ನ್ಯಾಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಹಾಗೆಂದ ಮಾತ್ರಕ್ಕೆ ಹಾಗೆಂದು ಶಿಕ್ಷೆಯಿಲ್ಲ ಎಂದರ್ಥವಲ್ಲ ಎಂದು ತಿಳಿಸಿದರು.