ಶಿಕ್ಷಣ ಕ್ಷೇತ್ರದಲ್ಲಿ  ಸಮಾನತೆ ಮನೆ ಮಾಡಿದೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೬: ಶಿಕ್ಷಣ ಕ್ಷೇತ್ರದಲ್ಲಿ ಇಂದು ಸಮಾನತೆ ಮನೆ ಮಾಡಿದೆ. ಶ್ರೀಮಂತರ ಮಕ್ಕಳು ಲಕ್ಷ ಲಕ್ಷ ರೂಪಾಯಿ ಫೀಸ್ ಕಟ್ಟಿ ಆಂಗ್ಲ ಶಿಕ್ಷಣ ಪಡೆಯುತ್ತಿದ್ದು, ಬಡವರ ಮಕ್ಕಳು ಸೌಲಭ್ಯಗಳಿಲ್ಲದ ಸರಕಾರಿ ಶಾಲೆಗಳಲ್ಲಿ ಓದುವ ಸ್ಥಿತಿ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಡಾ. ಎನ್.ಮೂರ್ತಿ ವಿಷಾದಿಸಿದರು.ನಗರದ ಪ್ರವಾಸಿ ಮಂದಿರ ರಸ್ತೆಯ ಸೀತಮ್ಮ ಕಾಲೇಜು ಎದುರಿರುವ ಚನ್ನಗಿರಿ ಕೇಶವಮೂರ್ತಿ ರೋಟರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಡಾ.ದಾದಾಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ 133ನೆ ಜಯಂತ್ಯುತ್ಸವ, ಬಾಬು ಜಗಜೀವನ್ ರಾಮ್ ಅವರ 38ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಬಗ್ಗೆ ಕಾನೂನು ಜಾಗೃತಿ ಮೂಡಿಸುವ ವಿಚಾರ ಸಂಕಿರಣ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸರಕಾರ ಸರಕಾರಿ ಶಾಲೆಗಳ ಉನ್ನತೀಕರಣ ಹಾಗು ಅಲ್ಲಿ ಉನ್ನತ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಗಮನಹರಿಸಬೇಕು. ಆಮೂಲಕ ದಲಿತ ಕುಟುಂಬದ, ಬದ ಕುಟುಂಬಗಳ ಮಕ್ಕಳು ಉತ್ತಮ ಶಿಕ್ಷಣ ಪಡೆದು, ಉನ್ನತ ಹುದ್ದೆಗಳಿಗೆ ಏರಲು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆನ್ನವರ್, ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ, ದಸಂಸ ಜಿಲ್ಲಾಧ್ಯಕ್ಷ ಎಚ್.ಮಂಜುನಾಥ್, ರಾಜನಹಳ್ಳಿ ಸೀತಮ್ಮ ಕಾಲೇಜು ಪ್ರಿನ್ಸಿಪಾಲ್ ಟಿ. ಎ. ಕುಸಗಟ್ಟಿ, ಅಲಿ ರೆಹಮತ್ ಪೈಲ್ವಾನ್ ಮತ್ತು ಇತರರು ಉಪಸ್ಥಿತರಿದ್ದರು.