18ರಂದು ರೈತರ ಜಾಗೃತಿ ಸಮಾವೇಶ
ಸಂಜೆವಾಣಿ ನ್ಯೂಸ್
ಮೈಸೂರು: ಜು.16:- ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜು.18ರಂದು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಎದುರು ರೈತರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ವರ್ಷದ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ಕೂಡಲೇ ಹಂಚಿಕೆ ಮಾಡಬೇಕು. 2022-23ನೇ ಸಾಲಿನ ವರ್ಷದ ಕಬ್ಬಿನ ಎಫ್‍ಆರ್‍ಪಿ ನಿಗದಿ ಮಾಡಿರುವ ಹೆಚ್ಚುವರಿ ದರ 150 ರೂ. ಕೊಡಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆ ಸರ್ಕಾರ ಜಾರಿ ಮಾಡಿರುವ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಪತ್ರವನ್ನು ಡಿಜಿಟಲೀಕರಣ ಆಪ್ ಮೂಲಕ ಬಿಡುಗಡೆ ಮಾಡಬೇಕು ಎಂದರು.
ಕಳೆದ 6 ವರ್ಷಗಳಿಂದ ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಉಪ ಉತ್ಪನ್ನಗಳ ಲಾಭವಿಲ್ಲ ಎಂದು ತೋರಿಸಿ ವಂಚನೆ ಮಾಡುತ್ತಿರುವುದು ತನಿಖೆಯಾಗಬೇಕು. ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿರುವುದನ್ನು ತಪ್ಪಿಸಲು ಸರ್ಕಾರ ವತಿಯಿಂದ ಡಿಜಿಟಲ್ ತೂಕ ಯಂತ್ರ ನಿರ್ಮಾಣ ಮಾಡಬೇಕು. ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚ ಸರ್ಕಾರ ಸೂಚನೆ ಮಾಡಿದ ದರಕ್ಕಿಂತ ಹೆಚ್ಚು ಕಡಿತ ಮಾಡಿ ರೈತರನ್ನು ಸುಲಿಗೆ ಮಾಡುತ್ತಿರುವುದು ನಿಲ್ಲಬೇಕು ಎಂದು ಒತ್ತಾಯಿಸಿದರು.
ರೈತರ ಕಬ್ಬು ಕಾರ್ಖಾನೆ ತಲುಪಿದ ತಕ್ಷಣ ಕಬ್ಬನ್ನು ತೂಕ ಮಾಡಿ ರೈತರಿಗೆ ಎಸ್‍ಎಂಎಸ್ ಮೂಲಕ ತಿಳಿಸಬೇಕು. ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಸುಟ್ಟು ಹಾನಿಯಾದಾಗ ಕಾರ್ಖಾನೆಯವರು ಕಬ್ಬಿನ ಹಣದಲ್ಲಿ 25 ಪರ್ಸೆಂಟ್ ಕಡಿತ ಮಾಡುತ್ತಿರುವುದನ್ನು ನಿಲ್ಲಿಸಿ, ಸರ್ಕಾರ ನಿಗದಿ ಮಾಡಿರುವ ಎಫ್‍ಆರ್‍ಪಿ ಹಣವನ್ನು ಪೂರ್ತಿ ಕೊಡಬೇಕು. ಕಬ್ಬು ಪೂರೈಕೆ ಮಾಡಿದ ಎಲ್ಲಾ ರೈತರಿಗೂ ಕಡ್ಡಾಯವಾಗಿ ಮೊಬೈಲ್ ಸಂದೇಶದ ಮೂಲಕ ಕಬ್ಬಿನ ಹಣ ಪಾವತಿ ಬಗ್ಗೆ ಬಿಲ್‍ಗಳನ್ನು ರವಾನಿಸಬೇಕು ಎಂದು ಆಗ್ರಹಿಸಿದರು.
ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ಪರಶಿವಮೂರ್ತಿ, ಕೆಂಡಗಣ್ಣಸ್ವಾಮಿ, ಸಾತಗಳ್ಳಿ ಬಸವರಾಜು, ಕಮಲಮ್ಮ, ಸಾಕಮ್ಮ, ಕುರುಬೂರು ಪ್ರದೀಪ್, ಬನ್ನೂರು ಸೂರಿ, ಅಂಬಳೆ ಮಂಜುನಾಥ್, ಕೆ.ಜಿ.ಗುರುಸ್ವಾಮಿ, ಗೌರಿಶಂಕರ್, ಸುನಿಲ್‍ಕುಮಾರ್, ಹೆಗ್ಗೂರು ರಂಗರಾಜು, ನಿಂಗರಾಜು, ಕಾಟೂರು ನಾಗೇಶ್, ವರಕೋಡು ಜಯರಾಮೇಗೌಡ, ಕುಳ್ಳೇಗೌಡ ಮುಂತಾದವರಿದ್ದರು.