ಅಭಿನಂದನಾ ಸಮಾರಂಭ: ಯಶಸ್ವಿಗೊಳಿಸುವಂತೆ ಮಂಜು ಮನವಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.16: ಮಂಡ್ಯ ಜಿಲ್ಲೆಯ ನೂತನ ಸಂಸದರು ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರಿಗೆ ದಿನಾಂಕ 21-07-2024 ನೇ ಭಾನುವಾರ ಅಭಿನಂದನಾ ಸಮಾರಂಭ ಆಯೋಜಿಸಿದ್ದು ತಾಲ್ಲೂಕಿನ ಮೈತ್ರಿಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಅವರು ಪಟ್ಟಣದ ಬಸವೇಶ್ವರನಗರದಲ್ಲಿರುವ ಜೆಡಿಎಸ್ ಕಛೇರಿಯಲ್ಲಿ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ
ತಾಲ್ಲೂಕಿನಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರು ಬಹಳ ಅನ್ಯೋನ್ಯತೆಯಿಂದ ಹಗಲುರಾತ್ರಿ ಎನ್ನದೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಕೆಲಸ ಮಾಡಿದ ಪರಿಣಾಮ ಕುಮಾರಣ್ಣ ಗೆಲುವು ಸಾಧಿಸಿದ್ದಾರೆ. ನಿರೀಕ್ಷೆಯಂತೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ತಾಲ್ಲೂಕಿಗೆ ಆಹ್ವಾನಿಸಿ ಅಭಿನಂದನೆ ಸಲ್ಲಿಸಬೇಕಾಗಿದ್ದು ಅದರಂತೆ ಇದೇ ತಿಂಗಳ 21ರಂದು ಭಾನುವಾರ ಪಟ್ಟಣದ ಪುರಸಭಾ ಕಛೇರಿಯ ಪಕ್ಕದ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನಾನು ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಿದ್ದು ತಾಲ್ಲೂಕಿನ ಹಲವು ಸಮಸ್ಯೆಗಳನ್ನು ಚರ್ಚಿಸಬೇಕಾಗಿದೆ. ಹೀಗಾಗಿ ಅಭಿನಂದನಾ ಕಾರ್ಯಕ್ರಮದ ಸಿದ್ದತೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಸಮಯದ ಕೊರತೆ ಇರುವುದರಿಂದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕು. ಅಂದಿನ ಕಾರ್ಯಕ್ರಮಕ್ಕೆ ಕನಿಷ್ಟ 40-45 ಸಾವಿರ ಜನ ಸೇರುವ ನಿರೀಕ್ಷೆಯಿದ್ದು ಕುಡಿಯುವ ನೀರು ಊಟ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ತಾವುಗಳು ಅಂದಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮ್, ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಎಸ್.ಎಲ್.ಮೋಹನ್, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಪ್ರಥಮದರ್ಜೆ ಗುತ್ತಿಗೆದಾರ ಎ.ಆರ್.ರಘು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಾರಂಗಿನಾಗರಾಜು, ಕಾರ್ಯದರ್ಶಿ ಪ್ರಕಾಶ್, ಎಳನೀರುಪುಟ್ಟಣ್ಣ, ಅಗ್ರಹಾರಬಾಚಹಳ್ಳಿನಾಗೇಶ್, ರಾಜೇಗೌಡ, ಹೆಳವೇಗೌಡ, ಕುರುಬಹಳ್ಳಿನಾಗೇಶ್, ವೀರಶೈವ ಮುಖಂಡ ತೋಟಪ್ಪಶೆಟ್ಟಿ, ಕಾಯಿಮಂಜೇಗೌಡ, ವಕೀಲ ನವೀನ್, ಪುರಸಭಾ ಮಾಜಿ ಸದಸ್ಯ ಹೇಮಂತ್‍ಕುಮಾರ್, ಅಲೋಕ, ಮಹದೇವೇಗೌಡ, ನಂದೀಶ್, ರವಿಕುಮಾರ್ ಸೇರಿದಂತೆ ನೂರಾರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.