ಕೈ ಬೀಸಿ ಕರೆಯುತ್ತಿರುವ ಪ್ರವಾಸಿಗರ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಜು.16:- ಮುಂಗಾರು ಆಗಮಿಸುತ್ತಿದ್ದಂತೆ ಮಂಜುವಿನಿಂದ ಕೂಡಿದ ಪ್ರಸಿದ್ಧ ಯಾತ್ರಾ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಪ್ರವಾಸಿಗರ ಸ್ವರ್ಗವೆಂದೆ ಬಣ್ಣಿಸಲ್ಪಡುವ ಮಾನ್ಸೂನ್ ಮಳೆ ನಡುವೆ ಹಿಮವನ್ನು ಆಸ್ವಾದಿಸುತ್ತಾ, ಆಧ್ಯಾತ್ಮಿಕತೆಯಲ್ಲಿ ಮಿಂದೇಳಲು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕಿಂತ ಮತ್ತೊಂದು ಯಾತ್ರಾಸ್ಥಳ ರಾಜ್ಯದಲ್ಲಿ ಇಲ್ಲ.
ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮುಂಗಾರಿನ ಅವಧಿ ಮತ್ತಷ್ಟು ಮಂಜು ಹೊತ್ತುತರುತ್ತಿದ್ದು ಹಿಮಾಚ್ಛಾದಿತ ಬೆಟ್ಟಕ್ಕೆ ಭಕ್ತರು, ಪ್ರವಾಸಿಗರು ಮನಸೋಲುತ್ತಿದ್ದಾರೆ.
ಬೆಟ್ಟದಲ್ಲಿ ತುಂತುರು ಮಳೆ ಆಗಾಗ್ಗೆ ಆಗುತ್ತಿದ್ದು, ಸದಾ ಬೆಟ್ಟವಲ್ಲದೇ ಸುತ್ತಮುತ್ತಲ ಪರಿಸರ ಮಂಜಿನಿಂದ ತುಂಬಿದ್ದು ಕಣ್ತುಂಬಿಕೊಳ್ಳಬಹುದಾಗಿದೆ.
ಮಧ್ಯಾಹ್ನ 12 ಗಂಟೆ ಆದರೂ ಮುಂಜಾನೆ 6 ರಂತೆ ಪರಿಸರಗೋಚರಿಸುತ್ತಿದೆ. ಪ್ರವಾಸಿಗರಿಗೆ ಗುಂಡ್ಲುಪೇಟೆ ಮತ್ತು ಬೆಟ್ಟದ ತಪ್ಪಲಿನಿಂದ ಬಸ್ ಸೌಕರ್ಯವಿದ್ದು, ವಾರಾಂತ್ಯದಲ್ಲಿ ಹೆಚ್ಚುವರಿ ಬಸ್‍ಗಳುಕೂಡಸಂಚರಿಸಲಿದೆ. ಗೋಪಾಲಸ್ವಾಮಿ ಹತ್ತಾರು ಊರುಗಳ ಆರಾಧ್ಯದೈವವಾಗಿದ್ದು ಆಧ್ಯಾತ್ಮಿಕ ನೆಲೆಗಟ್ಟಿನಲ್ಲೂ ಈ ದೇವಾಲಯ ಪುರಾಣ ಪ್ರಸಿದ್ಧವಾಗಿದೆ.
ಬೆಟ್ಟ ಹತ್ತುವಾಗ ಚಿರತೆ, ಹುಲಿ ದರ್ಶನವೂ ಆಗುವ ಸಾಧ್ಯತೆ ಇದೆ. ಮಕ್ಕಳೊಂದಿಗೆ ತೆರಳುವಾಗ ಪೋಷಕರು ಜಾಗೃತೆ ವಹಿಸಬೇಕು.