ಅಥರ್ಗಾ: ಉಚಿತ ನೋಟಬುಕ್ ವಿತರಣೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.16:ಜಯನಗರ ಬೆಂಗಳೂರು ಶಾಸಕ, ರಕ್ಷಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಬೆಂಗಳೂರು ಬಿಜೆಪಿ ದಕ್ಷಿಣ ವಲಯ ಅಧ್ಯಕ್ಷರು ಆಗಿರುವ ಸಿ.ಕೆ. ರಾಮಮೂರ್ತಿ ಅವರು ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ 150 ಮಕ್ಕಳಿಗೆ ಉಚಿತವಾಗಿ 500 ಲಾಂಗ್‍ಸೈಜ್ ನೋಟಬುಕ್‍ಗಳನ್ನು ಉಚಿತವಾಗಿ ವಿತರಿಸಿದ್ದಾರೆ.
ಈ ಶಾಲೆಯ ಹಿಂದಿನ ಶಿಕ್ಷಕಿ, ಹಿಂದಿನ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ (ಸಿಆರ್‍ಪಿ) ಆಸ್ಟಿನ್‍ಟೌನ್ ಸುಮಂಗಲಾ ಬೈರಶೆಟ್ಟಿ ಅವರ ಮೂಲಕ ನೋಟಬುಕ್‍ಗಳನ್ನು ವಿತರಿಸಲಾಯಿತು.
ಸರಳ ಸಮಾರಂಭದಲ್ಲಿ ಅಥರ್ಗಾ ಗ್ರಾಮ ಪಂಚಾಯತ ಅಧ್ಯಕ್ಷ ನಾಗುಗೌಡ ಪಾಟೀಲ ಅವರು ಅಧ್ಯಕ್ಷತೆ ವಹಿಸಿ, ಶಾಸಕರ ಮಾದರಿ ಶಿಕ್ಷಣ ಪೂರಕ ಪ್ರೋತ್ಸಾಹಕ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸುತ್ತ ಪ್ರತಿಯೊಬ್ಬರು ಸಮಾಜಮುಖಿ ಹಾಗೂ ಶಿಕ್ಷಣ ಪ್ರೋತ್ಸಾಹಕ ಕಾರ್ಯಗಳನ್ನು ಮಾಡುವುದು ಜವಾಬ್ದಾರಿಯುತ ಪ್ರಜೆಗಳ ಕರ್ತವ್ಯ ಎಂದರು.
ಪಂಚಾಯತಿ ಉಪಾಧ್ಯಕ್ಷ ಜಯರಾಮ ರಾಠೋಡ, ಸದಸ್ಯರುಗಳಾದ ಹನಮಂತ್ರಾಯ ಬಿರಾದಾರ, ಚಂದು ಬಳಗಾರ, ಸತೀಶ ಜಿಗಜಿಣಗಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸಲಿಂಗ ಪೂಜಾರಿ ಹಾಗೂ ಉಪಾಧ್ಯಕ್ಷ ಹುಸೇನ ಬಳಗಾರ ಅವರು ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕ ಪಿ.ಎಲ್. ನಿವರಗಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಛಪ್ಪರಬಂದ ನಿರೂಪಿಸಿದರು. ಶಿಕ್ಷಕ ಬಸಲಿಂಗ ಪೂಜಾರಿ ವಂದಿಸಿದರು.