ಮಕ್ಕಳಲ್ಲಿ ಧನಾತ್ಮಕ ಶಕ್ತಿ ತುಂಬಿದರೆ ಕಲಿಕೆ ಸುಗಮ
ಕೋಲಾರ,ಜು,೧೫- ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುವಂತೆ ಮಾಡಲು ಧನಾತ್ಮಕ ಶಕ್ತಿ ತುಂಬುವ ಅಗತ್ಯವಿದೆ, ಶಿಕ್ಷಕರು ಮಾಡುವ ಭೋಧನೆಯನ್ನು ಗಮನವಿಟ್ಟು ಕೇಳುವಂತೆ ಮಾಡಲು ವಿವಿಧ ಚಟುವಟಿಕೆಗಳ ಮೂಲಕ ಮಾರ್ಗದರ್ಶನ ನೀಡುತ್ತಿರುವುದಾಗಿ ಮಂಗಳೂರಿನ ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಸೊಸೈಟಿಯ ಸುಬ್ರಹ್ಮಣ್ಯ ತಿಳಿಸಿದರು.
ಜಿಲ್ಲೆಯ ಸೋಮಯಾಜಲಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಹಮಿಕೊಂಡಿದ್ದ ಕಲಿಕೆಗೆ ಧನಾತ್ಮಕ ಶಕ್ತಿ ತುಂಬುವ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಧನಾತ್ಮಕ ಶಕ್ತಿ ಹೆಚ್ಚಿಸಲು ವಿವಿಧ ರೀತಿಯ ಆಸನಗಳನ್ನು ಮಕ್ಕಳಿಗೆ ಹೇಳಿಕೊಟ್ಟ ಅವರು, ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಈ ಕಾರ್ಯಾಗಾರ ಆಯೋಜಿಸಿದ್ದು, ವ್ಯಕ್ತಿತ್ವ ವಿಕಸನ ಮತ್ತು ಸುಲಭ ಕಲಿಕಾ ವಿಧಾನಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಟ್ರಸ್ಟ್ ಮಾಡುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಲು ಮಕ್ಕಳಿಗೆ ಕೋರಿದರು.
ಮಕ್ಕಳಲ್ಲಿ ಸಮಯಪ್ರಜ್ಞೆ ಅತ್ಯಗತ್ಯ ಎಂದು ತಾಕೀತು ಮಾಡಿದ ಅವರು, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ಈ ತರಬೇತಿ ವೇದಿಕೆಯಾಗಬೇಕು, ಇದು ಎಸ್ಸೆಸ್ಸೆಲ್ಸಿ ಫಲಿತಾಂಶ ಗುಣಾತ್ಮಕಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಬೇಕು ಆಗ ಮಾತ್ರ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಧನಾಮತ್ಮಕ ಮನಸ್ಥಿತಿಗೆ ಉತ್ತೇಜನ ನೀಡುವ ಕೆಲಸವಾಗಬೇಕು, ಈ ಕಾರಣಕ್ಕಾಗಿಯೇ ೧೨ ತಂತ್ರಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಶಿಕ್ಷಕರಿಗೆ ಈಗಾಗಲೇ ತಿಳಿಸಿಕೊಟ್ಟಿದ್ದೇವೆ ಎಂದರು.
ಸೂಪತ್ ಬ್ರೈನ್ ಯೋಗ, ಬ್ರೈನ್ ಬ್ಯಾಲೆನ್ಸ್,ಕಟ್ ಕಟ್ ಮೆಥೆಡ್ ಮತ್ತಿತರ ಅಂಶಗಳನ್ನು ಶಿಕ್ಷಕರು ಅಳವಡಿಸಿಕೊಂಡು ಮಕ್ಕಳ ಮನಸ್ಥಿತಿ ಅರಿತು ಅವರಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಅಗತ್ಯವಾದ ರೀತಿಯಲ್ಲೇ ಬೋಧನಾ ಕ್ರಮ ನಡೆಸಲಿದ್ದು, ಮಕ್ಕಳು ಆಸಕ್ತಿಯಿಂದ ಕೇಳಲು ಕೋರಿದರು.
ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಎಸ್.ಜೆ.ಸಲೀಂ ಮಾತನಾಡಿ, ಶಿಕ್ಷಕರು ಬದಲಾವಣೆಯಾದರೆ ಇಡೀ ವ್ಯವಸ್ಥೆಯೇ ಬದಲಾವಣೆಯಾಗುತ್ತದೆ ಎಂಬ ಮಾತು ಸತ್ಯ, ಈ ನಿಟ್ಟಿನಲ್ಲಿ ಸಮಾಜ ಹಾಗೂ ದೇಶಕ್ಕೆ ಉತ್ತಮ ಸಾಧಕರನ್ನು ಕಳುಹಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ, ನಮ್ಮ ಕಲಿಕಾ ನೀತಿ ಸಮಾಜದ ಮೇಲೂ ಪರಿಣಾಮ ಬೀರುತ್ತದೆ ಆದ್ದರಿಂದ ಹೊಣೆಯರಿತು ಕೆಲಸ ಮಾಡೋಣ ಎಂದರು.
ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ಈ ತರಬೇತಿ ವೇದಿಕೆಯಾಗಬೇಕು, ಇದು ಎಸ್ಸೆಸ್ಸೆಲ್ಸಿ ಫಲಿತಾಂಶ ಗುಣಾತ್ಮಕಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಬೇಕು ಆಗ ಮಾತ್ರ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎ.ಅರುಣ್‌ಕುಮಾರ್, ರೆಡ್ಡಮ್ಮ, ರವೀಂದ್ರ, ಅರುಣಾಕಲುಮಾರಿ, ತೇಜೋವತಿ, ರಾಜೇಶ್ವರಿಬಾಯಿ, ಪವಿತ್ರ, ಶಂಕರಮ್ಮ ಜಗದೀಶ್, ಮೋಹನ್‌ಬಾಬು, ಸ್ವಾತಿ, ಚಂದ್ರು, ಜಿಲ್ಲಾ ವೃತ್ತಿಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ಮತ್ತಿತರರಿದ್ದರು.