ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಸ್ಥಾಪನೆಗೆ ಚಿಂತನೆ
ಕೋಲಾರ, ಜು.೧೬- ಜಿಲ್ಲೆಯ ಕೆಜಿಎಫ್ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಜಮೀನು ಮತ್ತು ಮಾನವ ಸಂಪನ್ಮೂಲ ಹೇರಳವಾಗಿದ್ದರೂ, ಉದ್ಯೋಗಿಗಳಾಗಲು ಅಗತ್ಯವಾದ ಕೌಶಲ್ಯದ ಕೊರತೆ ಇದೆ ಆದ್ದರಿಂದ ಜಿಲ್ಲೆಯಲ್ಲಿ ಸುಸಜ್ಜಿತ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ತೆರೆಯುವ ಅಗತ್ಯವಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ನೂತನ ಸಂಸದ ಎಂ.ಮಲ್ಲೇಶಬಾಬು ತಿಳಿಸಿದರು.
ನಗರದ ಗೋಲ್ಡ್‌ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ನೂತನ ಸಂಸದ ಹಾಗೂ ಸದರಿ ಸೊಸೈಟಿ ನಿರ್ದೇಶಕರೂ ಆಗಿರುವ ಅವರಿಗೆ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಮುಂದಾಲೋಚನೆ ಇಲ್ಲದೇ ಮೊದಲೇ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸಿದರೆ ಆ ಕಂಪನಿಗಳಿಗೆ ಅಗತ್ಯವಾದ ಕೌಶಲ್ಯ ಇರುವ ಯುವಕರ ಕೊರತೆ ನೆಪವೊಡ್ಡಿ ಹೊರಗಿನವರು ಬಂದು ಉದ್ಯೋಗ ಪಡೆದುಕೊಳ್ಳುತ್ತಾರೆ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ಕೌಶಲ್ಯ ಅಭಿವೃದ್ದಿ ತರಬೇತಿ ಕೇಂದ್ರ ಅತಿ ಶೀಘ್ರ ಸ್ಥಾಪಿಸಬೇಕು ಎಂಬುದು ತಮ್ಮ ಗುರಿಯಾಗಿದೆ ಎಂದರು.
ಐಟಿಐ,ಡಿಪ್ಲೊಮೊ ಮತ್ತಿತರ ಕೋರ್ಸ್ ಓದಿದ್ದರೂ, ಓದಿರೋದೊಂದು ಮಾಡುತ್ತಿರುವ ಕೆಲಸ ಬೇರೊಂದು ಎಂಬುದನ್ನು ಕಾಣುತ್ತಿದ್ದೇವೆ, ಸ್ಥಳೀಯ ಯುವಕರಿಗೆ ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ್ಯವನ್ನು ಕಲಿಸಕೊಟ್ಟರೆ ಉದ್ಯಮಿಗಳವರು ನಮ್ಮ ಯುವಕರನ್ನು ಉದ್ಯೋಗದಿಂದ ವಂಚಿಸಲು ಕಷ್ಟವಾಗುತ್ತದೆ ಆದ್ದರಿಂದ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದರು.
ಕೆಜಿಎಫ್‌ನಗರದಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ, ಹಿಂದೆ ಅಲಂಗೂರು ಶ್ರೀನಿವಾಸ್ ಸಚಿವರಾಗಿದ್ದಾಗ ವಿಶೇಷ ಸ್ಥಾನಮಾನ ನೀಡಿ ಪ್ರತಿವರ್ಷ ೨೦ ಕೋಟಿರೂ ಆ ನಗರದ ಮೂಲಸೌಲಭ್ಯ ಅಭಿವೃದ್ದಿಗೆ ನೀಡುವಂತೆ ಮಾಡಿದ್ದರು ಆದರೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿಯಾಗಿಲ್ಲ ಎಂದ ಅವರು, ಕೈಗಾರಿಕೆಗಳು ಇಲ್ಲಿಗೆ ಬರಲು ಉದ್ಯಮಿಗಳಿಗೆ ಅಗತ್ಯವಾದ ವಾತಾವರಣ ಸೃಷ್ಟಿಯೂ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಉಳ್ಳವರಿಗೆ ಕೊರತೆ ಇಲ್ಲ, ಇಲ್ಲಿ ಮಾವು ಹಾಗೂ ಟಮೋಟೋ ಸಂಸ್ಕರಣಾ ಘಟಕ, ಫುಡ್ ಪ್ರೊಸೆಸಿಂಗ ಘಟಕ ಸ್ಥಾಪಿಸಲು ಮುಂದೆ ಬಂದರೆ ಕೇಂದ್ರ ಸರ್ಕಾರದಿಂದ ಸಿಗುವ ಸಹಾಯಧನ ಕೊಡಿಸುವುದಾಗಿ ಭರವಸೆ ನೀಡಿ, ಸಹಕಾರಿ ರಂಗದ ಅಭಿವೃದ್ದಿಗೂ ಕೈಜೋಡಿಸುವ ಭರವಸೆ ನೀಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಗೋಲ್ಡ್‌ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಮಾತನಾಡಿ, ನಮ್ಮ ಸಂಸ್ಥೆಯ ನಿರ್ದೇಶಕರು ಸಂಸದರಾಗಿದ್ದಾರೆ ಎಂಬ ಹೆಮ್ಮೆ ಇದೆ, ಬೇರೆ ರಾಜಕಾರಣಿಗಳಂತೆ ಮಲ್ಲೇಶಬಾಬು ಅಲ್ಲ, ಅವರಲ್ಲಿ ಬದ್ದತೆ, ಜನಪರ ಕೆಲಸ ಮಾಡುವ ಇಚ್ಚಾಶಕ್ತಿ ಇದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಪ್ರೊ.ವಿ.ಶ್ರೀರಾಮ ಮಾತನಾಡಿ, ಕೋಲಾರ ಜಿಲ್ಲೆಯ ಅಭಿವೃದ್ದಿಯ ಕನಸು ಹೊಂದಿರುವ ಮಲ್ಲೇಶಬಾಬು ಸಂಸದರಾಗಿರುವುದು ಹೆಮ್ಮೆಯ ವಿಷಯವಾಗಿದೆ, ಅವರ ಅಭಿವೃದ್ದಿಪರ ಚಿಂತನೆ ಹಾಗೂ ಪ್ರಯತ್ನಕ್ಕೆ ಕೇಂದ್ರ ಸಚಿವರಾದ ಕುಮಾರಣ್ಣ ನೆರಳಾಗಿದ್ದು, ಜಿಲ್ಲೆಯ ಅಭಿವೃದ್ದಿಗೆ ಸಾಕಾರವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಮೂರಾಂಡಹಳ್ಳಿ ಡಾ.ಇ.ಗೋಪಾಲಪ್ಪ, ವಕೀಲ ಅಮರೇಂದ್ರ, ಸೊಸೈಟಿಯ ಕಾನೂನು ಸಲಹೆಗಾರ ಎಂ.ರಾಮಲಿಂಗೇಗೌಡ, ನಿರ್ದೇಶಕರಾದ ಡಿ.ನಾಗರಾಜಪ್ಪ, ಎ.ಎಸ್.ನಂಜುಂಡಗೌಡ, ಎಸ್.ಎ.ನಾರಾಯಣಸ್ವಾಮಿ, ಸಿ.ನಾಗರಾಜ, ಸರ್ತಾಜ್‌ಸಾಬಿ, ಎನ್.ರಂಗಯ್ಯ, ಕೆ.ಎನ್.ವೆಂಕಟರವಣಪ್ಪ, ಎಸ್.ವಿ.ನಾರಾಯಣರೆಡ್ಡಿ, ಎಂ.ಲೋಕೇಶಮೂರ್ತಿ, ಸೊಸೈಟಿ ಸಿಇಒ ಡಿ.ಎಂ.ಶ್ರೀಕಾಂತ, ಮೇಲ್ವಿಚಾರಕ ವಿ.ನಾರಾಯಣಸ್ವಾಮಿ ಮತ್ತಿತರರಿದ್ದರು.