ಟೊಮಾಟೊ ಮಾರುಕಟ್ಟೆಗೆ ಜಾಗ ನೀಡಲು ರೈತರ ಆಗ್ರಹ
ಕೋಲಾರ, ಜು-೧೬- ತಾಲ್ಲೂಕಿನ ಚಲುವನಹಳ್ಳಿ ಸರ್ವೇ ನಂ ೭೩ ರಲ್ಲಿರುವ ೪೩ ಎಕರೆ ಜಮೀನನ್ನು ಟೆಮೋಟೋ ಮಾರುಕಟ್ಟೆ ಅಭಿವೃದ್ದಿಗೆ ಮಂಜೂರು ಮಾಡಿ ರಿಯಲ್ ಎಸ್ಟೇಟ್ ಭೂಗಳ್ಳರಿಂದ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಲು ಜಿಲ್ಲೆಗೊಂದು ವಿಶೇಷ ನ್ಯಾಯಾಲಯದ ಸ್ಥಾಪನೆ ಮಾಡಿ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿ ಹದಗೆಟ್ಟಿರುವ ತಾಲ್ಲೂಕು ಕಛೇರಿಗಳನ್ನು ಸರಿಪಡಿಸಬೇಕೆಂದು ರೈತ ಸಂಘದಿಂದ ಕಂದಾಯ ಮಂತ್ರಿಗಳಾದ ಕೃಷ್ಣಬೈರೇಗೌಡ ರವರಿಗೆ ಬ್ಯಾಟರಾಯನಪುರ ಕಛೇರಿಯಲ್ಲಿ ಬೇಟಿಯಾಗಿ ಮನವಿ ನೀಡಿ ಒತ್ತಾಯಿಸಲಾಯಿತು.
ಲಕ್ಷಾಂತರ ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ಸೂಕ್ತವಾದ ಬೆಲೆಗೆ ಮಾರಾಟ ಮಾಡಲು ಅವಶ್ಯಕತೆ ಇರುವ ಎ.ಪಿ.ಎಂ.ಸಿ. ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಜಿಲ್ಲೆಯ ಜನ ಪ್ರತಿನಿಧಿಗಳು ಜಿಲ್ಲಾಡಳಿತ ವಿಫಲವಾಗಿರುವ ಕಾರಣ ಮೂರು ತಿಂಗಳು ಕಷ್ಟಾಪಟ್ಟು ಬೆಳೆದ ಬೆಳೆ ಮಾರುಕಟ್ಟೆಗೆ ಬಂದರೆ ಜಾಗದ ಸಮಸ್ಯೆಯ ನೆಪದಲ್ಲಿ ಪ್ರತಿ ಕೆ.ಜಿ.ಮೇಲೆ ೧೦ ರಿಂದ ೨೦ ರೂಪಾಯಿ ಕಡಿತವಾಗುತ್ತಿರುವುದರಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ರೈತರು ನಷ್ಟಕ್ಕೆ ಒಳಾಗುತ್ತಿದ್ದಾರೆಂದು ಎ.ಪಿ.ಎಂ.ಸಿ. ಜಾಗದ ಸಮಸ್ಯೆ ಬಗ್ಗೆ ಸಚಿವರಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವರಿಕೆ ಮಾಡಿದರು.
ಹತ್ತಾರು ವರ್ಷಗಳಿಂದ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆ ಹರಿಸಿ ಅಭಿವೃದ್ದಿ ಪಡಿಸಿ ರೈತರು ದಲ್ಲಾಳರು ಮತ್ತು ವ್ಯಾಪಾರಸ್ಥರ ಹಿತ ಕಾಯಬೇಕೆಂದು ನೂರಾರು ಹೋರಾಟ ಮಾಡಿದರು. ಕನಿಷ್ಠ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜೊತೆಗೆ ಅವಶ್ಯಕತೆ ಇಲ್ಲದ ಮಾರುಕಟ್ಟೆಗೆ ಅಭಿವೃದ್ದಿಗೆ ಯೋಗ್ಯವಿಲ್ಲದ ಜಮೀನನ್ನು ಕಂದಾಯ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರೂ ಜಾಗ ಸಿಗುತ್ತಿಲ್ಲ. ಆದರೆ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಒತ್ತುವರಿಯಾಗಿದ್ದ ಸರ್ಕಾರಿ ಕೆರೆ, ಉಳಿಸುವಂತೆ ಲೋಕಾಯುಕ್ತ ಕಛೇರಿಯಲ್ಲಿ ಕೇಸು ದಾಖಲು ಮಾಡಿದ ನಂತರ ಮಾನ್ಯ ಉಪ ವಿಭಾಗಾದಿಕಾರಿಗಳು ಕೆರೆ ಎಂದು ಆದೇಶ ಮಾಡಿದ್ದು, ಮಾನ್ಯರು, ಕೂಡಲೇ ೪೩ ಎಕರೆ ಸರ್ಕಾರಿ ಜಮೀನನ್ನು ಟೆಮೋಟೋ ಮಾರುಕಟ್ಟೆಯ ಅಭಿವೃದ್ದಿಗೆ ಮಂಜೂರು ಮಾಡಿ ಅಭಿವೃದ್ಧಿ ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಂತ ಸರ್ಕಾರಿ ಆಸ್ತಿಗಳು ಹಾಗೂ ರೈತರ ಜೀವನಾಡಿಯಾಗಿರುವ ಕೆರೆ, ರಾಜಕಾಲುವೆ ಗುಂಡುತೋಪುಗಳು, ಕಂದಾಯ ಅಧಿಕಾರಿಗಳ ನಿರ್ಲಕ್ಷ ಬೇಜವಾಬ್ದಾರಿಯಿಂದ ಭೂಗಳ್ಳರ ಪಾಲಾಗುತ್ತಿವೆ. ಮಳೆ ನೀರು ಸರಾಗವಾಗಿ ಹರಿಯಲು ಕಾಲುವೆಗಳಿಲ್ಲದೆ, ರೈತ ಬೆಳೆ ಹಾಗೂ ಬಡವರ ಮನೆಗಳಿಗೆ ನುಗ್ಗಿ ಅವಾಂತರಗಳನ್ನು ಸೃಷ್ಟಿ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೆಪದಲ್ಲಿ ಸರ್ಮಪಕವಾಗಿ ಗ್ರಾಮೀಣ ಸೇವೆ ಮಾಡದೆ ಹಳ್ಳಿಗಳನ್ನು ಮರೆತು ನಗರಕ್ಕೆ ಹೊಂದಿಕೊಂಡು ರೈತರ ಪ್ರತಿ ಕೆಲಸಗಳಿಗೂ ದಲ್ಲಾಳರನ್ನು ಅವಲಂಭಿಸಬೇಕಾದ ಪರಿಸ್ತಿತಿಯ ಜೊತೆಗೆ ತಾಲ್ಲೂಕು ಅಡಳಿತಗಳು ಜನ ಸಾಮಾನ್ಯರ ಪರ ಇಲ್ಲದೆ, ರಿಯಲ್ ಎಸ್ಟೇಟ್ ಉದ್ದಿಮೆಗಳ ಅತ್ತೆ ಮನೆಯಾಗಿ ಮಾರ್ಪಟ್ಟಿವೆ ಎಂದು ಅವ್ಯವಸ್ಥೆ ವಿರುದ್ದ ಶಾಸಕರ ಮುಂದೆ ಬೇಸರವ್ಯಕ್ತಪಡಿಸಿದರು.
ಮಾನ್ಯರು ಜಿಲ್ಲಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳನ್ನು ಭೂಗಳ್ಳರಿಂದ ರಕ್ಷಣೆ ಮಾಡಲು ಪ್ರತಿ ಜಿಲ್ಲೆಗೊಂದು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಎ.ಪಿ.ಎಂ.ಸಿ. ಅಭಿವೃದ್ದಿಗೆ ಅವಶ್ಯಕತೆ ಇರುವ ಚಲುವನಹಳ್ಳಿ ಜಮೀನನ್ನು ಮಂಜೂರು ಮಾಡಿ ಅಭಿವೃದ್ದಿ ಮಾಡಲು ಜಿಲ್ಲಾಧಿಕಾರಿಗಳು, ಆದೇಶ ಮಾಡಬೇಕೆಂದು, ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಕಂದಾಯ ಮಂತ್ರಿಗಳಾದ ಶ್ರೀ ಕೃಷ್ಣಬೈರೇಗೌಡ ರವರು ಟೆಮೊಟೋ ಮಾರುಕಟ್ಟೆಯ ಜಾಗದ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಜೊತೆಗೆ ಹದಗೆಟ್ಟಿರುವ ಕಂದಾಯ ಇಲಾಖೆಯನ್ನು ಸರಿಪಸಿ, ಸರ್ಕಾರಿ ಆಸ್ತಿಗಳನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈ.ಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ಪುತ್ತೇರಿ ರಾಜು, ಕುಮಾರ್ ರಾಮಸಾಗರ ವೇಣು, ಮುಂತಾದವರು ಇದ್ದರು.