ಪ್ರೊ. ವಾಘಮಾರೆ ಶಿವಾಜಿ ಅವರ ಸೇವೆ ಸ್ಮರಣೀಯ: ಪ್ರೊ. ದಯಾನಂದ ಅಗಸರ
ಕಲಬುರಗಿ:ಜು.15: ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಏಳಿಗೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರೊ. ವಾಘಮಾರೆ ಶಿವಾಜಿ ಅವರ ಸೇವೆ ಸ್ಮರಣೀಯ. ವಿದ್ಯಾರ್ಥಿಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಮತ್ತು ಕಾಳಜಿ ವಹಿಸಿದ್ದರು. ಗುರುವಿನ ತಾಳ್ಮೆ ಮತ್ತು ಅಧ್ಯಯನ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಸಭಾಭವನದಲ್ಲಿ ಪ್ರಾಧ್ಯಾಪಕ ಪ್ರೊ. ವಾಘ್ಮೋರೆ ಶಿವಾಜಿ ಅವರ ಸೇವಾ ನಿವೃತ್ತಿ ಅಂಗವಾಗಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಾಣಿಜ್ಯ ಅಧ್ಯಯನ ಕೇಂದ್ರದಲ್ಲಿ ಸುಧೀರ್ಘ 36 ವರ್ಷ 6 ತಿಂಗಳು ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕ ಪ್ರೊ. ವಾಘಮಾರೆ ಶಿವಾಜಿ ಅವರಿಗೆ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಬಳಗ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ ಗೌರವಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಪ್ರೊ. ವಾಘ್ಮೋರೆ ಶಿವಾಜಿ ಅವರು ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನರಾಗಿ ಅತ್ಯುತ್ತಮ ಸೇವೆಯನ್ನು ವಿಭಾಗ ಮತ್ತು ವಿಶ್ವವಿದ್ಯಾಲಯಕ್ಕೆ ನೀಡಿದ್ದಾರೆ. ವಿಶ್ವವಿದ್ಯಾಲಯದ ಹಣಕಾಸು ವಿಭಾಗದ ಉಪ ವಿತ್ತಾಧಿಕಾರಿ ಸೇವೆಯನ್ನು ನಾವು ಮರೆಯುವಂತಿಲ್ಲ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದಿರುವ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಉತ್ತಮ ಸ್ಥಾನದಲ್ಲಿದ್ದಾರೆ ಎಂದರು.
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ. ಎಚ್. ವೈ. ಕಾಂಬ್ಳೆ ಮಾತನಾಡಿ ವಾಘಮಾರೆ ಶಿವಾಜಿ ಅವರ ಸರಳತೆ ಮತ್ತು ವೃತ್ತಿ ಬಗ್ಗೆಗಿನ ಕಾಳಜಿ ಹಾಗೂ ವಾಣಿಜ್ಯ ಸಂಶೋಧನೆಗೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದರು.
ಪ್ರೊ. ವಾಘ್ಮೋರೆ ಶಿವಾಜಿ ಮಾತನಾಡಿ ವಿದ್ಯಾರ್ಥಿಗಳ ಬದುಕನ್ನು ರೂಪಿಸಲು ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಆದರಿಂದಲೇ ವಿಶ್ವವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪ್ರೀತಿ ಗಳಿಸಲು ಸಾಧ್ಯವಾಯಿತು ಎಂದು ಸೇವಾ ಅವಧಿಯಲ್ಲಿನ ಕೆಲವು ಅವಿಸ್ಮರಣೀಯ ಸಂಗತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ರಾಜನಾಳ್ಕರ್ ಲಕ್ಷ್ಮಣ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಣಿಜ್ಯ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎ.ಪಿ ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಾಘಮಾರೆ ಗುರುಗಳ ಜೊತೆಗಿನ ಸ್ನೇಹ ಮತ್ತು ಒಡನಾಟವನ್ನು ನೆನಪಿಸಿಕೊಂಡರು. ಅವರ ಶೈಕ್ಷಣಿಕ ಮತ್ತು ಸಂಶೋಧನೆ ಕಡೆಗಿನ ಕಾಳಜಿಯನ್ನು ಸ್ಮರಿಸಿಕೊಂಡರು. ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಸಿ.ಎಸ್ ಬಸವರಾಜ, ಡಾ. ಬಿ.ಎಂ ಕನಹಳ್ಳಿ, ಡಾ. ಬಿ.ವಿಜಯಾ ಮತ್ತು ವಾಘಮಾರೆ ಶಿವಾಜಿಯವರ ಧರ್ಮಪತ್ನಿ ಲತಾ ವಾಘಮಾರೆ ಹಾಗೂ ಕುಟುಂಬದ ಸದಸ್ಯರು, ವಿಭಾಗದ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕು. ಶ್ರದ್ಧಾ ಪುರಾಣಿಕ ಮತ್ತು ಅಪರ್ಣ ಅತಿಥಿಗಳನ್ನು ಪರಿಚಯಿಸಿದರು. ಸಂತೋಷಕುಮಾರ ಹಂಗನಕಟ್ಟಿ ವಂದಿಸಿದರು. ನಿಜಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.