ಅಪಘಾತದಲ್ಲಿ ಗಾಯಗೊಂಡಿದ್ದ ಪೌರಕಾರ್ಮಿಕ ಮಹಿಳೆ ಸಾವು
ಕಲಬುರಗಿ,ಜು.15-ಇಲ್ಲಿನ ಬುದ್ಧ ನಗರದಿಂದ ಮಹಾನಗರ ಪಾಲಿಕೆಗೆ ಬೈಕ್ ಮೇಲೆ ಕೆಲಸಕ್ಕೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ಡಾಗಿ ಬಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೌರ ಕಾರ್ಮಿಕ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬುದ್ಧ ನಗರದ ಲಕ್ಷ್ಮೀ ನಾಗರಾಜ ಯಳಸಂಗಿ ಮೃತಪಟ್ಟ ಮಹಿಳೆ.
ಜು.11 ರಂದು ಬುದ್ಧ ನಗರದಿಂದ ಮಹಾನಗರ ಪಾಲಿಕೆಗೆ ಇವರು ಬೈಕ್ ಹಿಂದೆ ಕುಳಿತು ಪೌರ ಕಾರ್ಮಿಕ ಕೆಲಸಕ್ಕೆ ಹೊರಟಿದ್ದರು. ಪಂಚಾಬ್ ಬೂಟ್ ಹೌಸ್ ಹತ್ತಿರ ನಾಯಿ ಅಡ್ಡಬಂದಿದ್ದರಿಂದ ಬೈಕ್ ಸ್ಕಿಡ್ಡಾಗಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.13 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತ ಮಹಿಳೆಯ ಪತಿ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
ವಿಷ ಸೇವಿಸಿ ಯುವಕ ಆತ್ಮಹತ್ಯೆ
ಹೊಟ್ಟೆ ಬೇನೆ ತಾಳದೆ ವಿಷ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಕಡಣಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ ತಂದೆ ಮಡಿವಾಳಪ್ಪ ಮಡಿವಾಳ (30) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಕಳೆದ 2-3 ವರ್ಷಗಳಿಂದ ಹೊಟ್ಟೆ ಬೇನೆಯಿಂದ ಬಳಲುತ್ತಿದ್ದ ಬಸವರಾಜ ಹೊಟ್ಟೆ ಬೇನೆ ತಾಳದೆ ಹೊಲದಲ್ಲಿ ಹುಲ್ಲಿಗೆ ಸಿಂಪರಣೆ ಮಾಡುವ ಕ್ರಿಮಿನಾಶಕ ಸೇವಿಸಿದ್ದ. ಆತನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬಸವರಾಜ ಸಹೋದರ ಮಲ್ಲಿಕಾರ್ಜುನ ಮಡಿವಾಳ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.