ಹಿರಿಯರನ್ನು ಗೌರವಿಸುವ ಸಂಸ್ಕøತಿ ಬೆಳೆಯಲಿ
ಕಲಬುರಗಿ:ಜು.15:ಸಮಾಜಕ್ಕೆ ಹಿರಿಯರು ಭಾರವಲ್ಲ. ಅವರು ತಮ್ಮಲ್ಲಿರುವ ಹಿರಿತನದ ಜ್ಞಾನ, ಅನುಭವವನ್ನು ಸಮಾಜಕ್ಕೆ ನೀಡಬೇಕು. ಕಿರಿಯರು ಅವರ ಅನುಭವದ ಮಾತುಗಳನ್ನು ಆಲಿಸಿ ಮುನ್ನಡೆಯಬೇಕು. ಹಿರಿಯರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡುವ ಭಾರತೀಯ ಶ್ರೇಷ್ಟ ಸಂಸ್ಕøತಿ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮುಲಗೆ ಹೇಳಿದರು.
ನಗರದ ಶಹಾಬಜಾರ ಕಬಾಡಗಲ್ಲಿಯ ಶ್ರೀ ಚನ್ನಮಲ್ಲೇಶ್ವರ ಪ್ರಾಥಮಿಕ ಶಾಲೆಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ಕಸಾಪ ಉತ್ತರ ವಲಯದ ವತಿಯಿಂದ ಸೋಮವಾರ ಜರುಗಿದ ‘ಹಿರಿಯರಿಗೆ ಗೌರವಿಸೋಣ-ಸಮೃದ್ಧ ಸಮಾಜ ಕಟ್ಟೋಣ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಣ ಪ್ರೇಮಿ, ಸಮಾಜ ಸೇವಕ ಧೂಳಪ್ಪ ಹಾದಿಮನಿ ಅವರಿಗೆ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶಿಕ್ಷಕ ಹಾಗೂ ಸಮಾಜ ಸೇವಕ ರವಿ ಬಿರಾಜಾದಾರ ಮಾತನಾಡುತ್ತಾ, ಹಾದಿಮನಿ ಅವರಲ್ಲಿರುವ ಸಮಾಜಪರ, ಶೈಕ್ಷಣಿಕ ಕಾಳಜಿ ಅಪಾರವಾದದ್ದು. ಸಮಾಜದಲ್ಲಿರುವ ಬಡ ಮಕ್ಕಳು ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಹಂಬಲದಿಂದ ಶ್ರಮಿಸುತ್ತಿದ್ದಾರೆ. ಸಾಮಾಜಿಕ ಕಾಳಜಿಯುಳ್ಳ ಅಪರೂಪದ ವ್ಯಕ್ತಿತ್ವ ಹೊಂದಿದ್ದಾರೆ. ಅವರನ್ನು ಗುರ್ತಿಸಿ ಬಳಗ ಮತ್ತು ಕಸಾಪ ಗೌರವಿಸುವ ಮೂಲಕ ಅವರಲ್ಲಿ ಮತ್ತಷ್ಟು ಸಮಾಜ ಸೇವೆ ಮಾಡಲು ಸ್ಪೂರ್ತಿ ತುಂಬುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಪ್ರಮುಖರಾದ ಚನ್ನಮಲ್ಲಯ್ಯ ಹಿರೇಮಠ, ಪ್ರಭುಶೆಟ್ಟಿ ಭಂಗೂರ, ಶರಣು, ಶ್ವೇತಾ ಮುತ್ತಾ, ಭಾಗಿರತಿ ಸೇರಿದಂತೆ ಇನ್ನಿತರರಿದ್ದರು.