ಮೋಹರಂ ಭಾವೈಕ್ಯತೆಯ ಸಂಕೇತದ ಉತ್ಸವ
ಕಲಬುರಗಿ:ಜು.15: ಭಾರತ ಅನೇಕ ಜಾತಿ, ಧರ್ಮಗಳಿಂದ ಕೂಡಿದ್ದ ದೇಶವಾಗಿದ್ದು, ಹಬ್ಬ, ಜಾತ್ರೆ, ಉತ್ಸವಗಳು ಪರಸ್ಪರ ಬೆಸೆಯುತ್ತವೆ. ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ ಇಂದಿಗೂ ಕೂಡಾ ಹಿಂದೂ-ಮುಸ್ಲಿಂ ಧರ್ಮಿಯರು ಜೊತೆಗೂಡಿ ಆಚರಿಸುವ ಪ್ರಮುಖ ಹಬ್ಬ ಮೋಹರಂವಾಗಿದೆ ಎಂದು ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ನಗರದ ಬ್ರಹ್ಮಪುರದಲ್ಲಿರುವ ಬಹು ಪುರಾತನ ಷಾ ಹುಸೇನ್ ಚಿಲ್ಲಾ ದರ್ಗಾದಲ್ಲ್ಲಿ ಸೋಮವಾರ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಮೋಹರಂ ಭಾವೈಕ್ಯತೆ ಕಾರ್ಯಕ್ರಮ’ದಲ್ಲಿ ದರ್ಗಾ, ಅಲೈಪೀರ್ ಸಂಬಂಧಿಸಿದ ಇಸ್ಲಾಂ ಭಾಂದವರಿಗೆ ಗೌರವಿಸಿ ಅವರು ಮಾತನಾಡಿದರು.
ಇಸ್ಲಾಂಮಿಕ ಚಿಂತಕ ಸಲೀಮ ಮುಜಾವರ ಮಾತನಾಡಿ, ಈ ದರ್ಗಾಕ್ಕೆ ನೂರಾರು ವರ್ಷಗಳ ಭವ್ಯವಾದ ಇತಿಹಾಸವಿದೆ. ಎಲ್ಲಾ ಧರ್ಮಿಯರು ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ. ಪ್ರತಿವರ್ಷ ಮೋಹರಂ ಹಬ್ಬ ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಅನ್ಯಾಯ, ಅಧರ್ಮ, ಶೋಷಣೆ ನಿರ್ಮೂಲನೆ ಶ್ರಮಿಸಿ, ಕೋಮು ಸೌಹಾರ್ಧತೆ ಸಾರಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಅಸ್ಲಾಂ ಶೇಖ್, ಓಂಕಾರ ವಿ.ವಠಾರ, ವಿಶ್ವನಾಥ ಪೂಜಾರಿ, ಅಶೋಕ ವಾಲಿಕಾರ, ವಿಠಲ ವಾಲಿಕಾರ, ಶಾಂತು ವಾಗ್ಮೋರೆ, ಸುಧೀರ ಜಿ.ತೆಲಂಗಿ, ಅರ್ಜುನ ಬೆಳಕೇರಿ, ಕಾಶಿಮ್ ಬಿ.ಖುರೇಶಿ, ರಾಣಪ್ಪ ಮೂಲಿಮನಿ, ಪ್ರೀತಿ ಬಿರಾದಾರ, ಪ್ರವೀಣ ಬಿರಾದಾರ ಸೇರಿದಂತೆ ಇನ್ನಿತರರಿದ್ದರು.