ಯಶಸ್ವಿಯಾಗಿ ಜರುಗಿದ ರೈತರ ಮಹಿಳೆಯರ ಮೂರು ದಿನಗಳ ತರಬೇತಿ
ಕಲಬುರಗಿ:ಜು.15:2023-24ನೇ ಸಾಲಿನ ರಾಜ್ಯ ವಲಯ ಯೋಜನೆಯಡಿ ಕೃಷಿ ಆಧಾರಿತ ಉಪ ಕಸಬುಗಳು ಹಾಗೂ ಸಾವಯವ ಕೃಷಿ ಕುರಿತು ರೈತ ಮಹಿಳೆಯರಿಗೆ ಮೂರು ದಿನಗಳ ತರಬೇತಿಯನ್ನು ಕಲಬುರಗಿ ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಈ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಅನೀಲಕುಮಾರ ರಾಠೋಡ ಅವರು, ಸಾವಯವ ಕೃಷಿ ಮಹತ್ವ ತಿಳಿಸಿದಲ್ಲದೇ ರೈತರಿಗೆ ಸಾವಯವ ಕೃಷಿ, ಪಾರಂಪರಿಕ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಲಬುರಗಿ ಮಹಾಗಾಂವ್ ಕ್ರಾಸ್ ಹೈನುಗಾರಿಕಾ ವiಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕರು, ಮಲ್ಲಿನಾಥ ಹೆಮಾಡಿ ಮಾತನಾಡಿ, ದೇಶಿ ಗೋವಿನ ಮಹತ್ವ, ಅದರಿಂದ ತಯಾರಾಗುವ ಉತ್ಪನ್ನಗಳ ಉಪಯೋಗಗಳನ್ನು ತಿಳಿಸುವ ಮೂಲಕ ಗೋವುಗಳ ರಕ್ಷಣೆ ಮಾಡುವುದು, ಗೋ ಕೃಪಾಮೃತ, ಜೀವಾಮೃತ, ಬೀಜಾಮೃತ ತಯಾರಿಕೆ ಮತ್ತು ಕಳೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಎನ್.ಆರ್.ಎಲ್.ಎಮ್. ಸಂಯೋಜಕ ಅಬ್ದುಲ್ ರಹೀಮ ಮಾತನಾಡಿ, ರೈತರು ಒಗ್ಗಟ್ಟಾಗಿ ಸಾವಯವ ಕೃಷಿಯಲ್ಲಿ ತೋಡಗಬೇಕು. ಅತಿಯಾದ ರಸಾಯನಿಕಗಳ ಉಪಯೋಗದಿಂದ ನೆಲ ಜಲ ಸಂಪತ್ತು ಕಲುಷಿತವಾಗುತ್ತಿದೆ. ಆದ್ದರಿಂದ ಸಾವಯವ ಕೃಷಿಯೋಂದೆ ಇದಕ್ಕೆ ಸೂಕ್ತ ಮಾರ್ಗವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಸಾಯಿ ಸಮರ್ಥ ಗೃಹ ಉದ್ಯಮಿ ಅನ್ನಪೂರ್ಣ ಸಂಗೋಳಗಿ, (ನಿವೃತ್ತ) ಕೃಷಿ ಅಧಿಕಾರಿಗಳು ಲಕ್ಷ್ಮಣ ಕಡಬೂರ್ ಹಾಗೂ ಶೋಕಕುಮಾರ ಬೆಣ್ಣೂರ್ ಅವರು ಮಾತನಾಡಿದರು.
ಮಣ್ಣು ಪರೀಕ್ಷೆ ಕೇಂದ್ರ, ಕರ್ನಾಟಕ ಬೀಜ ಸಂಸ್ಕರಣ ಘಟಕ, ಕೃಷಿ ವಿಜ್ಞಾನ ಕೇಂದ್ರದ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕೇಂದ್ರ. ಕಲಬುರಗಿ-ಬೀದರ ಹಾಗೂ ಯಾದಗೀರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಗಮಕ್ಕೆ ಎಲ್ಲಾ 32 ಜನ ರೈತ ಮಹಿಳೆಯರಿಗೆ, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಮುಖ್ಯಸ್ಥರು ಅನೀಲಕುಮಾರ ರಾಠೋಡ ಹಾಗೂ ಕೃಷಿ ಅಧಿಕಾರಿ ಯಾಸ್ಮಿನ್‍ರವರ ನೇತೃತ್ವದಲ್ಲಿ ಕ್ಷೇತ್ರ ಭೇಟಿ ಮಾಡಿಸಲಾಯಿತು.
ನಂತರ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ರೈತ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.