ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು, ಹಕ್ಕು, ಕಾಯ್ದೆಗಳ ಬಗ್ಗೆ ಜಾಗೃತಿ ಅಗತ್ಯ: ನ್ಯಾ.ಬಿ.ಎಸ್. ಭಾರತಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.28-ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಹಯೋಗದಲ್ಲಿ ಕಾರ್ಮಿಕ ಕಾಯ್ದೆ, ಯೋಜನೆ ಅನುಷ್ಠಾನ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದಿನ ದಿನದ ಜಿಲ್ಲಾಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ಕಷ್ಟಜೀವಿಗಳು ಹಾಗೂ ಶ್ರಮಜೀವಿಗಳಾಗಿದ್ದಾರೆ. ಇದನ್ನು ಅರಿತಿರುವ ಸರ್ಕಾರಗಳು ಕಾರ್ಮಿಕರು ಸಮಾಜದಲ್ಲಿ ಎಲ್ಲರಂತೆ ಸರಿಸಮಾನವಾಗಿ ಬದುಕಲು ಕನಿಷ್ಠ ವೇತನ, ದಿನಗೂಲಿ, ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಜಾರಿಗೆ ತಂದಿವೆ. ಈ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರಿಗೆ ಅವರ ಹಕ್ಕುಗಳು ಕಾಯ್ದೆಗಳ ಬಗ್ಗೆ ಜಾಗೃತಿ ಅವಶ್ಯವಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್ ಅವರು ಮಾತನಾಡಿ ಕಾರ್ಮಿಕರು-ಮಾಲೀಕರ ನಡುವೆ ಉತ್ತಮ ಒಡನಾಟ, ಬಾಂಧವ್ಯವಿರಬೇಕು. ತಂತ್ರಜ್ಞಾನ ಮುಂದುವರೆದಿದ್ದರೂ ಕಾರ್ಮಿಕರನ್ನು ಎಂದಿಗೂ ಕಡೆಗಣಿಸಬಾರದು. ಕಟ್ಟಡ ಕಾರ್ಮಿಕರು ಪಡೆದಿರುವ ಗುರುತಿನ ಚೀಟಿಯನ್ನು ಪ್ರತಿವರ್ಷ ನವೀಕರಿಸಬೇಕು. ವ್ಯಕ್ತಿ ಯಾವುದೇ ನಿವೇಶನ ಖರೀದಿಸಿದರೂ ಶೇ. 1ರಷ್ಟು ವಂತಿಕೆಯನ್ನು ಕಾರ್ಮಿಕ ಕಲ್ಯಾಣ ನಿಧಿಗೆ ನೀಡಬೇಕಾಗಿದೆ. ಕೆಲಸದ ಅವಧಿಯಲ್ಲಿ ಅಚಾನಕ್ ಆಗಿ ಪ್ರಾಣಹಾನಿಯಾದರೂ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ಅವರು ಮಾತನಾಡಿ ದೇಶದಲ್ಲಿ ಸಂಘಟಿತರಿಗಿಂತ ಅಸಂಘಟಿತ ಕಾರ್ಮಿಕರು ಹೆಚ್ಚಾಗಿದ್ದಾರೆ. ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ಕಾಯಕದಲ್ಲಿ ಪ್ರತಿಯೊಬ್ಬರು ಕೈಲಾಸ ಕಾಣಬೇಕು. ನಾವು ಯಾವುದೇ ಕೆಲಸ ಮಾಡಿದರೂ ವೃತ್ತಿಗೌರವನ್ನು ಹೊಂದಬೇಕು. ವೃತ್ತಿಗೆ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು. ಕಾರ್ಮಿಕರಿಗೆ ವೃತ್ತಿಸಂಸ್ಕøತಿ ಇರಬೇಕು. ಇದಕ್ಕಾಗಿ ಕೌಶಲ್ಯ ವೃದ್ಧಿಸುವುದು ಕಾರ್ಮಿಕ ಇಲಾಖೆ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಕಾರ್ಮಿಕರ ಹಕ್ಕುಗಳ ಜಾಗೃತಿ ಮೂಡಿಸಲು ಕಾರ್ಯಾಗಾರ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಕಾರ್ಮಿಕರು ಸುಶಿಕ್ಷಿತರಾಗಬೇಕು. ಹಾಗೆಯೇ ಸಂಘಟಿತರಾಗಬೇಕು. ಸರ್ಕಾರ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳು, ವಿದ್ಯಾರ್ಥಿವೇತನ, ಮಹಿಳೆಯರಿಗೆ ಹೆರಿಗೆ ರಜೆ, ಭವಿಷ್ಯನಿಧಿ, ಇತರೆ ಸವಲತ್ತುಗಳನ್ನು ಜಾರಿಗೊಳಿಸಿದೆ. ಕಾರ್ಮಿಕರು ಕಾರ್ಯಾಗಾರದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಕಾರ್ಮಿಕ ಅಧಿಕಾರಿ ರಾಜಗೋಪಾಲ್ ಅವರು ಯಾವುದೇ ದೇಶದ ಅರ್ಥಿಕಾಭಿವೃದ್ಧಿಗೆ ಕಾರ್ಮಿಕರ ಕಾನೂನುಗಳು ಪೂರಕವಾಗಿರಬೇಕು. ಹಿಂದೆ ಬ್ರಿಟಿಷರ ಕಾರ್ಮಿಕರಿಗೆ ಜಾರಿ ಮಾಡಿದ್ದ ಕಾನೂನೂಗಳು ಇದ್ದವು, ಸ್ವಾತಂತ್ರ್ಯ ನಂತರ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಒಟ್ಟು 58 ಕಾರ್ಮಿಕರ ಹಿತರಕ್ಷಣೆಗಾಗಿ ಜಾರಿಗೆ ತಂದಿವೆ ಎಂದರು. ಅಲ್ಲದೆ ಕಾಯ್ದೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಮೈಸೂರು ಉಪವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಎಸ್.ಆರ್. ವೀಣಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತಾ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಂ. ಮಹೇಶ್, ಮೈಸೂರಿನ ಎಲ್.ಐ.ಸಿ ಹಿರಿಯ ಶಾಖಾ ವ್ಯವಸ್ಥಾಪಕರಾದ ಹೆಚ್.ಆರ್. ಸತೀಶ್, ಡಿಸಿಬಿಒ ಇಎಸ್‍ಐ ಕಾರ್ಪೋರೇಶನ್ ಶಾಖಾ ವ್ಯವಸ್ಥಾಪಕರಾದ ವಿನಯ್ ಕುಮಾರ್, ಮಂಡ್ಯದ ಭವಿಷ್ಯನಿಧಿ ಕಚೇರಿಯ ಎನ್‍ಫೋರ್ಸ್‍ಮೆಂಟ್ ಅಧಿಕಾರಿ ಎಂ. ಅಶೋಕ್ ಕುಮಾರ್, ಹಿರಿಯ ಕಾರ್ಮಿಕ ನಿರೀಕ್ಷಕ ವಿ.ಎಲ್. ಪ್ರಸಾದ್, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.