ಪಂಚಾಯಿತಿ ಅಧ್ಯಕ್ಷರಾಗಿ ಸಿ.ನಿಂಗರಾಜು ಆಯ್ಕೆ
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಸೆ.28:– ತಾಲೂಕಿನ ಕಿರಗಸೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಹುಣಸೂರು ಗ್ರಾಮದ ಸಿ.ನಿಂಗರಾಜು ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದಾರೆ.
ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷೆ ಚಂದ್ರಮ್ಮ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಿಗದಿಯಾಗಿತ್ತು. ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಿ.ನಿಂಗರಾಜು ಹಾಗೂ ಮಂಗಳಮ್ಮ ಅವರು ಉಮೇದುವಾರಿಕೆ ಸಲ್ಲಿಸಿ ಕಣದಲ್ಲಿದ್ದರು. ನಂತರ ನಡೆದ ಮತದಾನದಲ್ಲಿ 9 ಮತಗಳನ್ನು ಪಡೆದ ನಿಂಗರಾಜು ಅಧ್ಯಕ್ಷರಾಗಿ ಆಯ್ಕೆಯಾದರೆ, 8 ಮತಗಳನ್ನು ಪಡೆದುಕೊಂಡ ಮಂಗಳಮ್ಮ ಪರಾಭವಗೊಂಡರು.
ಅಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆಯಲ್ಲಿ ಪಂಚಾಯಿತಿಯ 17 ಸದಸ್ಯರು ಭಾಗವಹಿಸಿದ್ದರು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಸಿ. ನಿಂಗರಾಜು ಬೆಂಬಲಿಗರು ಪಟಾಕಿ ಸೇರಿಸಿ, ಸಿಹಿಯನ್ನ ವಿತರಿಸಿ ವಿಜಯೋತ್ಸವ ಆಚರಿಸಿದರು. ಚುನಾವಣಾಧಿಕಾರಿಯಾಗಿ ಬನ್ನೂರು ಕಾವೇರಿ ನೀರಾವರಿ ನಿಗಮದ ಎ ಇ ಇ ಎಸ್.ಮಂಜುನಾಥ್, ಸಹಾಯಕ ಚುನಾವಣೆ ಅಧಿಕಾರಿಯಾಗಿ ಪಿಡಿಒ ಎಸ್.ಜಿ.ಧರಣೇಶ್ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಪ್ರಾಬಲ್ಯವಿರುವ ಪಂಚಾಯತಿಯಲ್ಲಿ ಅಧ್ಯಕ್ಷ ಗಾದಿಗೆ ಇವರ ಪೈಪೆÇೀಟಿ ನಡೆಯಿತು. ಮುಖಂಡ ಫೈನಾನ್ಸ್ ಕಾಂತರಾಜು ಬನದ ಸದಸ್ಯರೇ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನೂತನ ಅಧ್ಯಕ್ಷರನ್ನು ಬಾಬೂಜಿ ಜನಕಲ್ಯಾಣ ಸಂಘದ ಅಧ್ಯಕ್ಷ ಮಲಿಯೂರು ಡಿ.ಶಂಕರ್, ಬನ್ನೂರು ಪುರಸಭೆ ಸದಸ್ಯ ಶಿವಣ್ಣ ಹಾಗೂ ಜಿಲ್ಲಾ ಕಾಂಗ್ರೆಸ್ ವೈದ್ಯರ ವಿಭಾಗದ ಅಧ್ಯಕ್ಷ ಡಾ.ಬಿ.ಪ್ರದೀಪ ಸನ್ಮಾನಿಸಿದರು.
ನೂತನ ಅಧ್ಯಕ್ಷ ಸಿ.ನಿಂಗರಾಜು ಮಾತನಾಡಿ, ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸಮರ್ಪಕ ನೀರಿಗೆ ಮೊದಲ ಆದ್ಯತೆಯನ್ನು ನೀಡುತ್ತೇನೆ. ಪಂಚಾಯಿತಿ ವ್ಯಾಪ್ತಿಯ 6 ಗ್ರಾಮಗಳ ಅಭಿವೃದ್ಧಿ ನನ್ನ ಜವಾಬ್ದಾರಿ ಎಂಬ ಭಾವನೆಯಿಂದ ಎಲ್ಲಾ ಸದಸ್ಯರೊಡನೆ ದುಡಿಯುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಂದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನ ಪಡೆಯಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಚಿನ್ನತಾಯಮ್ಮ, ಮಾಜಿ ಅಧ್ಯಕ್ಷೆ ಚಂದ್ರಮ್ಮ, ಸದಸ್ಯರಾದ ನಾಗರಾಜು, ಭಾಗ್ಯ, ಶಿವರಾಜು, ಗಿರಿಜಮ್ಮ, ಎಂ.ಮಹೇಶ, ಪಿ.ನಾಗರಾಜು, ಬಿ.ಮಹದೇವಸ್ವಾಮಿ, ಆರ್. ಗಿರೀಶ್, ಕಾಮಿನಿ, ನಾಗರತ್ನಮ್ಮ, ಮಾಜಿ ಅಧ್ಯಕ್ಷರಾದ ಮಂಡಿ ಪ್ರಕಾಶ್, ರವಿ, ಎ.ಜೆ.ವೆಂಕಟೇಶ್, ಕಸಬಾ ಪಿ ಎ ಸಿ ಸಿ ಎಸ್ ಅಧ್ಯಕ್ಷ ಮಲ್ಲಣ್ಣ, ಗುತ್ತಿಗೆದಾರ ಬಿ.ಮಂಟೇಲಿಂಗಪ್ಪ, ಬಸವರಾಜು, ಮುಖಂಡರುಗಳಾದ ಡಿ.ಎಲ್. ಮಹದೇವಪ್ಪ, ರಾಜಬುದ್ಧಿ, ಮಹದೇವಣ್ಣ, ಬಿ.ಎಂ.ಶಿವಕುಮಾರ್, ಸಿದ್ದಪ್ಪ, ವಸಂತ, ರಾಚಪ್ಪ ಹಾಗೂ ಇತರರು ಇದ್ದರು.