ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯ ಸಹಕಾರ ನೀಡಬೇಕು: ತುಂಬಲ ರಾಮಣ್ಣ
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಸೆ.28:- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಉಚಿತವಾಗಿ ಕಲ್ಪಿಸಿಕೊಡಲಾಗುವುದು ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂದು ತುಂಬಲ ರಾಮಣ್ಣ ಹೇಳಿದರು.
ಪಟ್ಟಣದ ತ್ರಿವೇಣಿ ನಗರದಲ್ಲಿರುವ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘದ ಆವರಣದಲ್ಲಿ ಬುಧವಾರ ನಡೆದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಪರಿಶಿಷ್ಟರಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಹೆಚ್ಚಿರುವುದರಿಂದ ಸಮುದಾಯದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಮಟ್ಟದಿಂದ ಕಾರ್ಯಕ್ಷೇತ್ರವನ್ನು ರಾಜ್ಯಮಟ್ಟಕ್ಕೂ ವಿಸ್ತರಿಸಿರುವ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘವನ್ನು ಉತ್ತರ ಕರ್ನಾಟಕದ ಭಾಗಕ್ಕೂ ವಿಸ್ತರಿಸುವ ಯೋಜನೆಯನ್ನು ಯೋಜನೆಯನ್ನು ಹಾಕಿಕೊಂಡಿದ್ದೇವೆ. ಎಲ್ಲಾ ಶಾಖೆಗಳಿಂದ 27,000 ಬೀರುದಾರ ಸದಸ್ಯರನ್ನು ಹೊಂದಿದ್ದು, 2023-24 ನೇ ಸಾಲಿನಲ್ಲಿ 64 ಲಕ್ಷ ರೂಗಳ ನಿವ್ವಳ ಲಾಭವನ್ನು ವಾರ್ಷಿಕವಾಗಿ ಗಳಿಸಿದ್ದೇವೆ. ತಾಲೂಕಿನಲ್ಲೂ 1015 ಸದಸ್ಯರಿದ್ದು, ಮತ್ತಷ್ಟು ಜನರಿಗೆ ಷೇರುದಾರ ಸದಸ್ಯತ್ವವನ್ನು ವಿಸ್ತರಿಸಲಾಗುವುದು ಎಂದು ತುಂಬಲ ರಾಮಣ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.75 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಭೂ ನ್ಯಾಯ ಮಂಡಳಿಯ ನಿರ್ದೇಶಕ ಕುಕ್ಕೂರು ಗಣೇಶ್, ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯ ಡಾ.ಅಭಿಲಾಶ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸರೋಜಮ್ಮ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಣಿಲಾ ಮಹದೇವಸ್ವಾಮಿ ಹಾಗೂ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಪರಸುವ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ದಿವ್ಯ ಸಾನಿಧ್ಯ ವಹಿಸಿದ್ದ ಭೋಧಿರತ್ನ ಬಂತೇಜಿ ಮಾತನಾಡಿದರು. ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಎಸ್ಸಿ/ಎಸ್ಟಿ ಹಿತ ರಕ್ಷಣಾ ಸಮಿತಿಯ ಸದಸ್ಯ ಸೋಸಲೆ ಮಹದೇವಸ್ವಾಮಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಳಗೂಡು ಶಿವಕುಮಾರ್, ಅಬಕಾರಿ ನಿರೀಕ್ಷಕಿ ಸುಧಾರಾಣಿ, ತಾ.ಪಂ ಮಾಜಿ ಸದಸ್ಯ ಎಂ.ಎಸ್.ಬಸವರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ಟಿ.ಬೆಟ್ಟಹಳ್ಳಿ ನಾಗರಾಜು, ಸಂಘದ ಕಾರ್ಯದರ್ಶಿ, ವಕೀಲ ಎಸ್.ಜಗದೀಶ್, ಉಪಾಧ್ಯಕ್ಷ ಡಿ.ಆರ್. ಪುಟ್ಟಸ್ವಾಮಿ, ನಿರ್ದೇಶಕರಾದ ಆರ್.ಮಹದೇವ, ಶ್ರೀಕಂಠ, ಚನ್ನವಾಜಮಂಗಲ ಹಾಗೂ ಇತರರು ಇದ್ದರು.